ಬೆಂಗಳೂರು: ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿಯಿಂದಾಗಿ ಏಕಕಾಲಕ್ಕೆ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆ ವಾಯುಭಾರ ಕುಸಿತ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಈಟಿವಿ ಭಾರತದ ಜತೆ ಮಾತನಾಡಿರುವ ಅವರು, ಅಕ್ಟೋಬರ್ನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸಾಮಾನ್ಯವಾಗಿ ಈ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ 170 ಮಿಲಿ ಮೀಟರ್‌ನಷ್ಟು ಮಳೆ ಬರಬೇಕಾಗಿತ್ತು. ಆದರೆ ಈ ಬಾರಿ 365 ಮಿ.ಮೀ ಮಳೆಯಾಗಿದೆ. ಹೆಚ್ಎಎಲ್ನಲ್ಲಿ 375 ಮಿ.ಮೀ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 400 ಮಿ.ಮೀ ಮಳೆಯಾಗಿದೆ ಎಂದರು.
ತಮಿಳುನಾಡು, ಲಕ್ಷ ದ್ವೀಪದಲ್ಲಿ ಮೇಲ್ಮೈ ಸುಳಿಗಾಳಿ
ತಮಿಳುನಾಡು ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಕಂಡು ಬಂದಿದ್ದು, 1.5 ಕಿ.ಮೀ ಎತ್ತರದ್ಲಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅದರಲ್ಲೂ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಧಾರಾಕಾರ ಮಳೆಯಾಗಿದೆ ಎಂದು ಹೇಳಿದರು.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
7 ಮಿ.ಮೀ.ಗಿಂತ ಜಾಸ್ತಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದೇವೆ. ನಾಳೆಯಿಂದ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನರದಲ್ಲಿ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹೇಳಿದರು.
ಮುಂಗಾರು ಕ್ಷೀಣ
ನಾವು ಮುಂಗಾರು ಗ್ರಾಫ್ ಲೈನ್ ನೋಡುವುದಾದರೆ ರಾಜ್ಯದಲ್ಲಿ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಮುಂಗಾರು ಕರ್ನಾಟಕದಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತದೆ ಹಾಗೂ ಹಿಂಗಾರು ಮಾರುತಗಳು ಪ್ರವೇಶ ಮಾಡುತ್ತದೆ. ಈ ಹಿನ್ನೆಲೆ ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದರು.
ಅಪರೂಪದ ಸನ್ನಿವೇಶ
ವಿಶೇಷ ಮಾರುತಗಳಿಗೆ, ವಾಯುಭಾರ ಕುಸಿತಕ್ಕೆ ವಿಶೇಷ ಕಾರಣಗಳು ಇರುವುದಿಲ್ಲ. ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಸಾಮಾನ್ಯವಾಗಿ ವಾಯುಭಾರ ಕುಸಿತ ಕಂಡು ಬರುತ್ತದೆ. ಆದರೆ ಬಂಗಾಳಕೊಲ್ಲಿ-ಅರಬ್ಬಿ ಸಮುದ್ರ ಎರಡೂ ಕಡೆ ಒಂದೇ ಬಾರಿ ಸಂಭವಿಸಿರುವುದು ಅಪರೂಪ ಅನ್ನಿಸಬಹುದು.
ಮಳೆ ಪ್ರಮಾಣ ತಗ್ಗುವ ಸೂಚನೆ ಇಲ್ಲ
ನಗರದಲ್ಲಿ ಇಂದು ಸ್ವಲ್ಪ ಜಾಸ್ತಿ ಮಳೆಯಾಗಲಿದ್ದು, ನಾಳೆ ಕಡಿಮೆಯಾಗಲಿದೆ. ಇನ್ನೆರಡು ಮೂರು ದಿನ ಮಳೆಯ ಪ್ರಮಾಣ ತಗ್ಗುತ್ತದೆ. ಹಿಂಗಾರು ಬಂದ ಮೇಲೆ ಮಳೆಯ ಪ್ರಮಾಣ ಜಾಸ್ತಿಯಾಗುತ್ತದೆ. ಸದ್ಯಕ್ಕಂತೂ ಸಂಪೂರ್ಣ ಮಳೆಯ ಪ್ರಮಾಣ ತಗ್ಗುವ ಹಾಗೆ ಕಾಣುತ್ತಿಲ್ಲ ಎಂದರು.