ದೇವನಹಳ್ಳಿ (ಬೆಂಗಳೂರು): ಒಡಿಶಾ ರೈಲು ದುರಂತದಿಂದಾಗಿ ತೊಂದರೆಗೆ ಸಿಲುಕಿದ್ದ 35 ಮಂದಿ ವಾಲಿಬಾಲ್ ಆಟಗಾರರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಕೋಲ್ಕತ್ತಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕ್ರೀಡಾಪಟುಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಬರಮಾಡಿಕೊಂಡರು. ಇವರು ಕೋಲ್ಕಾತ್ತಾದ ಚಾಂದ್ ನಗರದಲ್ಲಿ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್ ಆಡಲು ಹೋಗಿದ್ದವರು. ರೈಲು ಅಪಘಾತದಿಂದ ಒಡಿಶಾದ ಹೌರಾ ಜಂಕ್ಷನ್ನಲ್ಲಿ ಸಿಲುಕಿದ್ದರು. ಹೀಗಾಗಿ ಇವರನ್ನು ರಾಜ್ಯ ಸರ್ಕಾರ ವಿಮಾನದಲ್ಲಿ ಕೋಲ್ಕತ್ತಾದಿಂದ ಸುರಕ್ಷಿತವಾಗಿ ಕರೆತಂದಿದೆ.
ಇದನ್ನೂ ಓದಿ: ಬಾಲಸೋರ್‌ನಲ್ಲಿ ಸಮರೋಪಾದಿಯಲ್ಲಿ ಸಾಗಿದ ಹಳಿ ದುರಸ್ತಿ ಕೆಲಸ: ವೈಮಾನಿಕ ದೃಶ್ಯ
ಒಡಿಶಾ ರೈಲು ದುರಂತದಿಂದ ರೈಲುಗಳ ಸಂಚಾರಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ ಶಿಪ್ಗೆ ತೆರಳಿದ್ದ ಕರ್ನಾಟಕದ 16 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ತಂಡದ ಆಟಗಾರರು ಹಾಗೂ ಕೋಚ್ಗಳು ಹೌರಾದಿಂದ ಬೆಂಗಳೂರಿಗೆ ವಾಪಸ್ ಬರಲಾಗದೆ ಪರದಾಡಿದ್ದರು. ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಸರ್ಕಾರ ಕ್ರೀಡಾಪಟುಗಳು ಹಾಗೂ ಕೋಚ್ಗಳನ್ನು ವಿಮಾನದ ಮೂಲಕ ರಾಜ್ಯಕ್ಕೆ ಕರೆತಂದಿದೆ.
ಇದನ್ನೂ ಓದಿ: ಒಡಿಶಾ ರೈಲು ದುರಂತ: ಬೈಡನ್, ಪುಟಿನ್ ಸೇರಿ ವಿಶ್ವ ನಾಯಕರಿಂದ ಸಂತಾಪ
ಈ ವೇಳೆ ಮಧ್ಯಮಗಳೊಂದಿಗೆ ಮಾತನಾಡಿದ ಕೋಚ್ ಮಮತಾ ಶೆಟ್ಟಿ, "ದೇವರ ದಯೆಯಿಂದ ನಾವು ಬಚಾವಾಗಿದ್ದೇವೆ. ಚಾಂಪಿಯನ್ ಶಿಪ್ ಮುಗಿಸಿ ಬಾಲಕ ಹಾಗೂ ಬಾಲಕಿಯರ ಎರಡು ತಂಡಗಳು ಬೆಂಗಳೂರಿಗೆ ಆಗಮಿಸುತ್ತಿದ್ದವು. ಬಾಲಕರ ತಂಡಕ್ಕೆ ಯಶವಂತಪುರ ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಬುಕ್ ಆಗಿತ್ತು. ಆದರೆ ಬಾಲಕಿಯರ ತಂಡಕ್ಕೆ ರಿಸರ್ವೇಷನ್ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್ ಪ್ರೆಸ್ನಲ್ಲಿ ಚೈನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರುವ ತೀರ್ಮಾನ ಮಾಡಿದ್ದೇವು. ಆದರೆ ಕೊನೆಯ ಕ್ಷಣದಲ್ಲಿ ಬೇರೆ ಬೇರೆ ಟ್ರೈನ್ ಬೇಡ, ಎರಡು ತಂಡಗಳು ಒಂದೇ ಟ್ರೈನ್‌ನಲ್ಲಿ ಹೋಗೋಣ ಅಂತ ನಿರ್ಧಾರ ಮಾಡಿದೆವು. ಇದರಿಂದ ನಾವು ಕೋರ್ ಮಂಡಲ್ ಟ್ರೈನ್‌ನಲ್ಲಿ ಪ್ರಯಾಣ ಮಾಡಲಿಲ್ಲ. ಹೀಗಾಗಿ ಅದೃಷ್ಟವಶಾತ್ ನಾವು ಬದುಕಿ ಬಂದೆವು" ಎಂದು ಘಟನೆಯ ಬಗ್ಗೆ ಮಾಹಿತಿ ನೀಡಿ ನಿರಾಳರಾದರು.
ಇದನ್ನೂ ಓದಿ: 90ಕ್ಕೂ ಹೆಚ್ಚು ರೈಲು ಸಂಚಾರ ರದ್ದು; ಒಡಿಶಾದಿಂದ ಹೊರಹೋಗುವ ವಿಮಾನ ದರ ಏರಿಸದಂತೆ ಸೂಚನೆ
ಸಿಎಂಗೆ ಧನ್ಯವಾದ: ರಾಜ್ಯಕ್ಕೆ ಆಗಮಿಸಲು ಪರಿತಪಿಸುತ್ತಿದ್ದ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ತಂಡಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೆರವಾಗಿ ತಂಡವು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಆಗಲು ಸಹಕರಿಸಿದ್ದರು. ತಮ್ಮ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾರ್ಮಿಕ ಸಚಿವ ಲಾಡ್ ಹಾಗೂ ಅಧಿಕಾರಿಗಳಿಗೆ ಕ್ರೀಡಾಪಟುಗಳು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಒಡಿಶಾ ರೈಲು ದುರಂತ : ಕೋಲ್ಕತ್ತಾದಲ್ಲಿ ಸಿಲುಕಿದ ಕರ್ನಾಟಕದ ವಾಲಿಬಾಲ್ ತಂಡಕ್ಕೆ ವಿಮಾನ ವ್ಯವಸ್ಥೆ