ಬೆಂಗಳೂರು: ಪ್ರಸಿದ್ಧ ಸಾಹಿತಿ ದಿ.ಪೂರ್ಣಚಂದ್ರ ತೇಜಸ್ವಿಯವರ ಪ್ರತಿಷ್ಠಾನಕ್ಕೆ ಕಳೆದ ವರ್ಷ ನಿಧನ ಹೊಂದಿದ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ.
ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷ ಸದಸ್ಯರ ನೇಮಕ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ತನ್ನ ಅಧೀನದಲ್ಲಿ ಬರುವ 21 ವಿವಿಧ ಟ್ರಸ್ಟ್ಗಳು ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕಳೆದ ವರ್ಷ ನಿಧನ ಹೊಂದಿದ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರನ್ನು ಮಹಿಳಾ ಸದಸ್ಯರನ್ನಾಗಿ ನೇಮಕ ಮಾಡಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.
ಗಣ್ಯರ ಹೆಸರಿನ ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರ ಜೊತೆಗೆ ಹಲವಾರು ಸದಸ್ಯರನ್ನು ನೇಮಿಸಲಾಗಿದ್ದು, ಪ್ರತಿ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಕಡ್ಡಾಯವಾಗಿ ಒಬ್ಬ ಮಹಿಳೆಯರನ್ನ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿರುವುದು ವಿಶೇಷವಾಗಿದೆ. ಆದರೆ, 21 ಪ್ರತಿಷ್ಠಾನ ಮತ್ತು ಟ್ರಸ್ಟ್ಗಳ ಪೈಕಿ ಕೇವಲ ಮೂರು (ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್, ಹಲಸಂಗಿ ಗೆಳೆಯರ ಪ್ರತಿಷ್ಠಾನ ಮತ್ತು ಬೆಟಗೇರಿ ಕೃಷ್ಣ ಶರ್ಮ ಟ್ರಸ್ಟ್) ಸಂಸ್ಥೆಗಳಿಗೆ ಮಹಿಳೆಯರನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
21 ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರ - ಸದಸ್ಯರ ನೇಮಕ: ಡಾ. ದ. ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ಧಾರವಾಡದ ಮನೋಜ ಪಾಟೀಲ್, ಬೆಂಗಳೂರಿನ ಡಾ. ಪುತಿನ ಟ್ರಸ್ಟ್ ಅಧ್ಯಕ್ಷರಾಗಿ ಪ್ರಸಿದ್ಧ ಕವಿ ಡಾ ಹೆಚ್ ಎಸ್ ವೆಂಕಟೇಶ ಮೂರ್ತಿ, ಧಾರವಾಡದ ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ನಾಗರಾಜ ಹವಾಲದಾರ, ಕೋಲಾರದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಟ್ರಸ್ಟ್ ಅಧ್ಯಕ್ಷರಾಗಿ ಡಾ. ವತ್ಸಲಾ ಮೋಹನ್, ಉಡುಪಿಯ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಅಧ್ಯಕ್ಷರಾಗಿ ಆನಂದ ಸಿ ಕುಂದರ್, ಹಾವೇರಿಯ ಡಾ. ವಿ ಕೃ ಗೋಕಾಕ್ ಪ್ರತಿಷ್ಠಾನ ಅಧ್ಯಕ್ಷರಾಗಿ ವಿ ಕೃ ಗೋಕಾಕ್ ಅವರ ಸಂಬಂಧಿಕರಾದ ಲೇಖಕ ಅನಿಲ ಗೋಕಾಕ್, ಸ್ವರ ಸಾಮ್ರಾಟ ಪಂ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ದಾರವಾಡದ ಶ್ರೀಪಾದ ಹೆಗಡೆ, ಕನ್ನಡ ಕುಲ ಪುರೋಹಿತ ಆಲೂರು ವೆಂಕಟ ರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ಧಾರವಾಡದ ಡಾ. ಶ್ರೀನಿವಾಸ ಪಾಡಿಗಾರ, ಬೆಟಗೆರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ಬೆಳಗಾವಿಯ ಡಾ. ಕವಿತ ಕುಸುಗಲ್, ಹಾವೇರಿಯ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ಸುಧೀರ್ ಸಿಂಹ ಘೋರ್ಪಡೆ ನೇಮಕಗೊಂಡಿದ್ದಾರೆ.
ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಡಾ. ಗುರುಪಾದ ಮರಿಗುದ್ದಿ, ಚಿತ್ರಕಲಾ ಶಿಲ್ಪಿ ಡಿ ವಿ ಹಾಲಬಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾಗಿ ಪಿ ಎಸ್ ಕಡೇಮನಿ, ಕೋಲಾರದ ಡಾ. ಡಿ ವಿ ಜಿ ಪ್ರತಿಷ್ಠಾನ ಅಧ್ಯಕ್ಷರಾಗಿ ಎಸ್ ದಿವಾಕರ, ಬಾಗಲಕೋಟೆಯ ಪಿ ಬಿ ಧುತ್ತರಗಿ ಪ್ರತಿಷ್ಠಾನ ಅಧ್ಯಕ್ಷರಾಗಿ ಶಿವಪ್ಪ, ಭರಮಪ್ಪ ಅದರಗುಂಚಿ, ಹಾವೇರಿಯ ಗಳಗನಾಥ ಮತ್ತು ನಾ. ರಾಜಪುರೋಹಿತ ಪ್ರತಿಷ್ಠಾನ ಅಧ್ಯಕ್ಷರಾಗಿ ಚಕ್ರವರ್ತಿ ಸೂಲಿಬೆಲೆ, ಮಂಡ್ಯದ ಕೆ ಎಸ್ ನರಸಿಂಹ ಸ್ವಾಮಿ ಟ್ರಸ್ಟ್ ಅಧ್ಯಕ್ಷರಾಗಿ ಡಾ. ಬಿ ವಿ ರಾಜಾರಾಮ್, ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪ ಪ್ರತಿಷ್ಠಾನ ಅಧ್ಯಕ್ಷರಾಗಿ ಡಾ.ಬಸವರಾಜ ಕಲ್ಗುಡಿ, ಚಿಕ್ಕಮಗಳೂರಿನ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಅಧ್ಯಕ್ಷರಾಗಿ ನರೇಂದ್ರ ದೇರ್ಲ, ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನ ಅಧ್ಯಕ್ಷರಾಗಿ ಸರಸ್ವತಿ ಚಿಮ್ಮಲಗಿ, ಬಾಗಲಕೋಟೆಯ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ ಅಧ್ಯಕ್ಷರಾಗಿ ಡಾ. ನೀಲಗಿರಿ ತಳವಾರ್ ಮತ್ತು ತುಮಕೂರಿನ ಡಾ. ಗುಬ್ಬಿ ವೀರಣ್ಣ ಟ್ರಸ್ಟ್ ಅಧ್ಯಕ್ಷರಾಗಿ ಗಂಗಾವತಿಯ ಡಾ. ಭೀಮಸೇನ್ ಅವರನ್ನು ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
(ಇದನ್ನೂ ಓದಿ: ಟ್ರಸ್ಟ್ ಹಣ ದುರುಪಯೋಗ ಆರೋಪ: ಮೇಧಾ ಪಾಟ್ಕರ್ ಸೇರಿ 11 ಜನರ ವಿರುದ್ಧ ಎಫ್ಐಆರ್)