ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ 2023 ಪರೇಡ್‌ಗೆ ಕರ್ನಾಟಕದ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಮುಂಚೆ ಕರ್ನಾಟಕ ರಾಜ್ಯಕ್ಕೆ ಗಣರಾಜ್ಯೋತ್ಸದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವ ಅವಕಾಶ ದೊರೆತಿರಲಿಲ್ಲ. ಇದೀಗ ರಾಜ್ಯದ ಸ್ತಬ್ದಚಿತ್ರ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿದೆ.
ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ಸಿಗದಿರುವ ಬಗ್ಗೆ ಕರ್ನಾಟಕದ ಜನರು ಆಕ್ರೋಶ ಹೊರಹಾಕಿದ್ದರು. ಪ್ರತಿಪಕ್ಷಗಳೂ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ಸಿಎಂ ಬೊಮ್ಮಾಯಿ ಕರ್ನಾಟಕದ ಸ್ತಬ್ಧಚಿತ್ರ ಈ ಬಾರಿಯೂ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಇರಲಿದೆ ಎಂದಿದ್ದರು. ಇದೀಗ ರಾಜ್ಯದ ಮನವಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಿದೆ.
ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸ್ತಬ್ಧಚಿತ್ರ ಆಯ್ಕೆಯಾಗಿರುವ ಬಗ್ಗೆ ತಿಳಿಸಿದ್ದಾರೆ. ಸ್ತಬ್ಧಚಿತ್ರ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಲಗತ್ತಿಸಿದ್ದಾರೆ. ಸ್ತಬ್ಧಚಿತ್ರ ಜ.19ರ ವೇಳೆಗೆ ಸಿದ್ಧಗೊಳ್ಳಬೇಕು. ಜ.23ರಿಂದ ಪರೇಡ್ ಪೂರ್ವಸಿದ್ಧತೆ ನಡೆಯಲಿದೆ. ಹೀಗಾಗಿ ನಿಗದಿತ ದಿನದೊಳಗೆ ಸ್ತಬ್ಧಚಿತ್ರ ತಯಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ಕರ್ನಾಟಕ ಪ್ರತಿನಿಧಿಸುವ 2023ರ ಸ್ತಬ್ಧಚಿತ್ರದಲ್ಲಿ ನಾರಿಶಕ್ತಿ ವಿಷಯವಸ್ತುವಾಗಿದೆ. ಈ ವಿಷಯವಸ್ತು ಆರಂಭದ ಕೆಲವು ಸುತ್ತಿನಲ್ಲಿ ಆಯ್ಕೆಯಾಗಿತ್ತು. ಸ್ತಬ್ಧಚಿತ್ರದ ವಿನ್ಯಾಸ ಮತ್ತು ಸಂಗೀತಕ್ಕೆ ತಜ್ಞರ ಸಮಿತಿ ಒಪ್ಪಿಗೆ ಸಹ ನೀಡಿತ್ತು. ಆದರೆ ಕೊನೆಯ ಸುತ್ತಿನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಕಳೆದ ಬಾರಿ ‘ಸಾಂಸ್ಕೃತಿಕ ತೊಟ್ಟಿಲು’ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಕರ್ನಾಟಕ ಪ್ರದರ್ಶಿಸಿದ್ದ ಟ್ಯಾಬ್ಲೋಗೆ ದ್ವಿತೀಯ ಪ್ರಶಸ್ತಿ ಸಿಕ್ಕಿತ್ತು.
ಈ ಮುಂಚೆ ಅವಕಾಶ ನಿರಾಕರಣೆ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕಳೆದ 8 ವರ್ಷಗಳಲ್ಲಿ ಭಾಗವಹಿಸುವ ಅವಕಾಶ ದೊರೆಯದ ಹಾಗೂ ಅತಿ ಕಡಿಮೆ ಬಾರಿ ಪಾಲ್ಗೊಂಡ ರಾಜ್ಯಗಳಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಈ ಬಾರಿ ಗಣರಾಜ್ಯೋತ್ಸದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವ ಅವಕಾಶ ದೊರೆತಿಲ್ಲ ಎಂದು ಗಣರಾಜ್ಯೋತ್ಸವ ಸ್ತಬ್ಧಚಿತ್ರ ನೋಡಲ್ ಅಧಿಕಾರಿ ಸಿ.ಆರ್.ನವೀನ್ ಸ್ಪಷ್ಟೀಕರಣ ನೀಡಿದ್ದರು.
ಜೊತೆಗೆ ಕಳೆದ ವರ್ಷದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ರಾಜ್ಯಗಳ ಪಟ್ಟಿ ಹಾಗೂ ಈ ಬಾರಿ ಆಯ್ಕೆಯಾಗಿರುವ ರಾಜ್ಯಗಳ ಪಟ್ಟಿಯನ್ನು ಗಮನಿಸಿದರೆ, 2022ರಲ್ಲಿ ಮೊದಲ ಮೂರು ಬಹುಮಾನ ಪಡೆದ ರಾಜ್ಯಗಳು ಈ ಬಾರಿ ಆಯ್ಕೆಯಾಗಿರುವುದಿಲ್ಲ. ಅಲ್ಲದೆ ಕಳೆದ ವರ್ಷ ಭಾಗವಹಿಸಿದ್ದ ರಾಜ್ಯಗಳಲ್ಲಿ ಮೂರು ರಾಜ್ಯಗಳನ್ನು ಹೊರತುಪಡಿಸಿದರೆ, ಇನ್ನುಳಿದ ರಾಜ್ಯಗಳು ಆಯ್ಕೆಯಾಗಿದಿಲ್ಲ ಎಂದು ತಿಳಿಸಿದ್ದರು.
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗದಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇತ್ತ ಪ್ರತಿಪಕ್ಷ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕನ್ನಡ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ, ದೆಹಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅವಕಾಶ ಪಡೆಯಲು ಪ್ರಯತ್ನ ನಡೆಸಿದ್ದೇವೆ. ಅವಕಾಶ ಸಿಗಲಿದೆ ಎಂಬ ವಿಶ್ವಾಸವಿದೆ. ರಾಜ್ಯದ ಸ್ತಬ್ದಚಿತ್ರವನ್ನು ತಿರಸ್ಕರಿಸಿಲ್ಲ. ಬೇರೆ ರಾಜ್ಯಗಳಿಗೆ ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ಈ ಬಾರಿ ರಾಜ್ಯಕ್ಕೆ ಅವಕಾಶ ಸಿಕ್ಕಿಲ್ಲ. ಆದರೂ ನಾವು ಪ್ರಯತ್ನ ನಡೆಸಿದ್ದೇವೆ ಎಂದಿದ್ದರು.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗದ ರಾಜ್ಯದ ಸ್ತಬ್ಧಚಿತ್ರ: ವಾರ್ತಾ ಇಲಾಖೆ ಸ್ಪಷ್ಟೀಕರಣ