ಬೆಂಗಳೂರು : ಕೊರೊನಾ ಸಂಕಷ್ಟ ಕಾಲದಿಂದಲೂ ಸರಿಯಾದ ವೇತನ ಸಿಗದೇ ಸಾರಿಗೆ ಸಂಸ್ಥೆಯ ನೌಕರರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಅನ್ಲಾಕ್ ಘೋಷಣೆಯಾಗಿ ಪರಿಸ್ಥಿತಿ ಯಥಾಸ್ಥಿತಿ ಬಂದರೂ ಪೂರ್ಣ ಸಂಬಳವಿಲ್ಲದೆ ಕೆಎಸ್ಆರ್ಟಿಸಿ ನೌಕರರ ಜೀವನ ಅತಂತ್ರ ಸ್ಥಿತಿಗೆ ಸಿಲುಕಿದೆ.
ಕೋವಿಡ್ ಅನ್ಲಾಕ್ ಆದ್ರೂ ಸಹ ಜನರು ಸಾರಿಗೆ ಪ್ರಯಾಣಕ್ಕೆ ಹಿಂದೇಟು ಹಾಕಿದರು. ಅಲ್ಲದೆ, ಎಲ್ಲಾ ಸಂಸ್ಥೆಗಳು ತಮ್ಮ ಕೆಲಸಗಾರರಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಅನುಮತಿ ನೀಡಿದರು.
ಇದರಿಂದ ಪ್ರಯಾಣಿಕರಿಲ್ಲದೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ, ಕೋವಿಡ್ ಪ್ರಾರಂಭ ಕಾಲದಿಂದಲೂ ರಾಜ್ಯ ಸಾರಿಗೆ ನೌಕರರ ತಿಂಗಳ ವೇತನವನ್ನು ಸರ್ಕಾರವೇ ಪೋಷಿಸುತ್ತಿದೆ.
ತಿಂಗಳಾಯ್ತು ಅಂದ್ರೆ ಸಾಕು ಸ್ಯಾಲರಿ ಸಮಸ್ಯೆ ಶುರುವಾಗುತ್ತೆ. ಸಂಬಳ ಇಲ್ಲದೆ ಸಾರಿಗೆ ನೌಕರರ ಬದುಕು ಕಷ್ಟಕರವಾಗಿದೆ. ಅಕ್ಟೋಬರ್ ಬಂದರೂ ಇನ್ನೂ ಸಾರಿಗೆ ನೌಕರರಿಗೆ ಆಗಸ್ಟ್ ತಿಂಗಳ ಅರ್ಧ ವೇತನವೇ ಸಿಕ್ಕಿಲ್ಲ. ಅರ್ಧ ವೇತನ ಪಡೆದು ಜೀವನ ಮಾಡೋದು ಹೇಗೆ? ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು ಅಂತಾ ನೌಕರರು ಪ್ರಶ್ನೆ ಮಾಡುತ್ತಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳಲ್ಲಿ ಸುಮಾರೂ 1,30,000 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಧ ವೇತನ ಪಡೆದುಕೊಂಡೇ ಜೀವನ ಮಾಡಬೇಕಿದೆ. ಕೊರೊನಾದಿಂದ ಸಾರಿಗೆ ನಿಗಮದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಪಾತಾಳಕ್ಕೆ ಕುಸಿದಿದೆ. ಸದ್ಯ ಸರ್ಕಾರದ ಅನುದಾನಕ್ಕೆ ಸಾರಿಗೆ ನಿಗಮಗಳು ಕಾಯುತ್ತಿವೆ.
ಸರ್ಕಾರ ಆಗಸ್ಟ್ ತಿಂಗಳ ಅರ್ಧ ಸಂಬಳ ಬಿಡುಗಡೆ ಮಾಡಿಲ್ಲ ಹೀಗಾಗಿ, ನೌಕರರಿಗೆ ಪೂರ್ತಿ ವೇತನ ಸಿಕ್ಕಿಲ್ಲ. ವೇತನ ಬಿಡುಗಡೆ ನಿರೀಕ್ಷೆಯಲ್ಲಿದ್ದು, ಈ ತಿಂಗಳು ಬಂದರೆ ದಸರಾ ಹಬ್ಬ ಇಲ್ಲಾವಾದರೆ ಹಬ್ಬ ಕಹಿ ಅಂತಾ ಸಾರಿಗೆ ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.