ಬೆಂಗಳೂರು: ರಾಜ್ಯ ವಿಧಾನಸಭೆಯ 15ನೇ ಅಧಿವೇಶನಕ್ಕೆ ಎಲ್ಲಾ ಸದಸ್ಯರು ಹಾಜರಾಗಬೇಕೆಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದಾರೆ. ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನವು ಪ್ರಜಾಪ್ರಭುತ್ವದ ದೇಗುಲ ಎಂಬುದರ ಅರಿವು ಎಲ್ಲಾ ಸದಸ್ಯರಿಗೂ ಇದೆ. ಹಾಗಾಗಿ, ತಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಫೆಬ್ರವರಿ 10ರಿಂದ ನಡೆಯಲಿರುವ ಜಂಟಿ ಅಧಿವೇಶನ ಹಾಗೂ ಫೆಬ್ರವರಿ 17 ರಿಂದ ನಡೆಯಲಿರುವ ಆಯವ್ಯಯ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದನದ ಘನತೆ ಹೆಚ್ಚಿಸಬೇಕು. ಅಧಿವೇಶನದ ವೇಳಾಪಟ್ಟಿ ಪ್ರಕಟಗೊಂಡ ನಂತರವೂ ಕೆಲವು ರಾಜಕೀಯ ಪಕ್ಷಗಳು ಹಾಗೂ ಸದಸ್ಯರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಗಮನಿಸಿದರೆ ತಮ್ಮ ಕೆಲಸ ಸುಲಭವಾಗಲಿದೆ ಎನಿಸುತ್ತದೆ. ಹೀಗಾಗಿ, ಅಧಿವೇಶನದ ಸಂದರ್ಭದಲ್ಲಿ ಸದಸ್ಯರ ಹಾಜರಾತಿ ಕುಸಿತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಸೂಚ್ಯವಾಗಿ ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಳೆ ಪ್ರಾರಂಭವಾಗಲಿರುವ ಜಂಟಿ ಅಧಿವೇಶನದಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಚಳಿಗಾಲದ ಅಧಿವೇಶನದ ನಂತರ ಹಾಗೂ ಜಂಟಿ ಅಧಿವೇಶನದ ನಡುವೆ ಸ್ವರ್ಗಸ್ಥರಾದ ಗಣ್ಯರಿಗೆ ಸಂತಾಪ ಸಲ್ಲಿಸಲಾಗುತ್ತದೆ. ಫೆಬ್ರವರಿ 13 ರಿಂದ ಸತತವಾಗಿ ನಾಲ್ಕು ದಿನಗಳು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯದ ಜೊತೆಗೆ ಎಂದಿನಂತೆ ಸದನದ ಕಾರ್ಯಕಲಾಪಗಳು ನಡೆಯುತ್ತವೆ ಎಂದು ಹೇಳಿದರು.
ಬಜೆಟ್ ಅಧಿವೇಶನ: ಫೆಬ್ರವರಿ 17ರಂದು ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಆಯವ್ಯಯ ಮಂಡಿಸುವುದರೊಂದಿಗೆ ಪ್ರಸಕ್ತ ಸಾಲಿನ ಆಯವ್ಯಯ ಅಧಿವೇಶನ ಪ್ರಾರಂಭವಾಗಲಿದೆ. ಆಯವ್ಯಯಕ್ಕೆ ಸಂಬಂಧಿಸಿದಂತೆ ಫೆಬ್ರವರಿ 20ರಿಂದ 24ರ ವರೆಗೆ ಚರ್ಚೆ ನಡೆಯಲಿದೆ ಎಂದು ಪ್ರಕಟಿಸಿದ ಸಭಾಧ್ಯಕ್ಷರು 11 ದಿನಗಳ ಅಧಿವೇಶನದ ಅವಧಿಯಲ್ಲಿ 9 ದಿನಗಳು ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯಲ್ಲಿ ಚರ್ಚೆಯೂ ಒಳಗೊಂಡಂತೆ ಇತರೆ ಕಾರ್ಯಕಲಾಪಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸದನ ಕಾರ್ಯಕಲಾಪ ಸಮಿತಿ ಸಭೆ: ಫೆಬ್ರವರಿ 13 ರಂದು ಸಭಾ ನಾಯಕರೂ ಆದ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರು ಹಾಗೂ ಸದನ ನಾಯಕರೊಂದಿಗೆ ಸದನ ಕಾರ್ಯಕಲಾಪ ಸಮಿತಿ ಸಭೆ ನಡೆಸಲಿದ್ದು, ಸದನದ ನಡೆ ನಿರ್ಧರಿಸಲಿದೆ. ಇದೀಗ ಸದನದಲ್ಲಿ ಮಂಡನೆಗೆ ಏಳು ವಿಧೇಯಕಗಳು ಸ್ವೀಕೃತವಾಗಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಹಾಗೂ ಆರು ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕಗಳು ಒಳಗೊಂಡಿವೆ. ಅಲ್ಲದೇ, 1300 ಪ್ರಶ್ನೆಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.
ಅತ್ಯುತ್ತಮ ಸದನ: ಭಾರತದಲ್ಲಿನ ವಿವಿಧ ರಾಜ್ಯಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳ ಕಾರ್ಯಕಲಾಪಗಳನ್ನು ಮತ್ತಷ್ಟು ಉತ್ತಮೀಕರಿಸಲು ಪ್ರೋತ್ಸಾಹದಾಯಕವಾಗಿ ಅತ್ಯುತ್ತಮ ಸದನ ಪ್ರಶಸ್ತಿಯನ್ನು ಸ್ಥಾಪಿಸಲು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಅವರು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ಅತ್ಯುತ್ತಮ ಸದನ ಪ್ರಶಸ್ತಿಗೆ ಸೂಕ್ತವಾದ ಮಾನದಂಡಗಳನ್ನು ರೂಪಿಸಿ ವರದಿಯನ್ನು ಸಲ್ಲಿಸಿದೆ. ಅದೇ ರೀತಿ ಇದೇ ವರ್ಷದಲ್ಲಿಯೇ ಪ್ರಶಸ್ತಿಯನ್ನು ಪ್ರಕಟಿಸುವಂತೆ ಲೋಕಸಭಾ ಸದಸ್ಯರಲ್ಲಿ ವಿನಂತಿಸಿದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.
ತಮ್ಮ ಇತ್ತೀಚಿನ ದೆಹಲಿ ಭೇಟಿಯ ಸಂದರ್ಭದಲ್ಲಿ ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸಂವಿಧಾನದ 10ನೇ ಅನುಸೂಚಿ, ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತಂತೆ ಕರ್ನಾಟಕ ವಿಧಾನಸಭೆಯ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಚರ್ಚೆ, ಸಂವಾದ, ಕಮ್ಮಟ ಹಾಗೂ ಕಾರ್ಯಾಗಾರಗಳ ಕುರಿತು ರಾಷ್ಟ್ರಪತಿ ದ್ರೌಪತಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಾಗ ಉಭಯ ನಾಯಕರು ತೀವ್ರ ಆಸಕ್ತಿ ತೋರಿದರಲ್ಲದೇ ಕರ್ನಾಟಕ ವಿಧಾನ ಸಭೆಯ ಈ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನ ಸಭಾ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೆಪಿಎಸ್ಸಿಗೆ ಸದಸ್ಯರ ನೇಮಕ, ಇಂಧನ ನೀತಿ ತಿದ್ದುಪಡಿಗೆ ಸಂಪುಟ ಸಭೆ ನಿರ್ಧಾರ