ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ಒಮಿಕ್ರಾನ್ ವೈರಾಣು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೈಕುಂಠ ಏಕಾದಶಿ ಮತ್ತು ಸಂಕ್ರಾಂತಿ ಹಬ್ಬ ಆಚರಣೆಗೋಸ್ಕರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.
ಇದೇ ತಿಂಗಳ 13ರಂದು ವೈಕುಂಠ ಏಕಾದಶಿ ಹಾಗೂ ಜ. 15 ರಂದು ಮಕರ ಸಂಕ್ರಾಂತಿ ಹಬ್ಬಗಳ ಆಚರಣೆ ನಡೆಯಲಿದೆ. ಈ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣಾ ಅಧಿನಿಯಮ, 2005ರ ಸೆಕ್ಷನ್ 24(ಎಲ್)ರ ಅಡಿ ಜ.4 ರಂದು ಹೊರಡಿಸಲಾದ ಮಾರ್ಗಸೂಚಿಗಳೊಂದಿಗೆ ಈ ಕೆಳಕಂಡ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶಿಸಿದ್ದಾರೆ.
1. ವೈಕುಂಠ ಏಕಾದಶಿ ಹಾಗೂ ಸಂಕ್ರಾಂತಿ ಹಬ್ಬಗಳ ಪುಯುಕ್ತ ದೇವಾಲಯದ ಶಾಸ್ತ್ರ, ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿ.
2. ವೈಕುಂಠ ಏಕಾದಶಿ ದಿನದಂದು ಈಗಾಗಲೇ ನಿಗದಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆ ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದು, ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ.
3. ಹಬ್ಬಗಳ ಆಚರಣೆಯ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳು ಇತ್ಯಾದಿಗಳನ್ನು ಆಯೋಜಿಸುವಂತಿಲ್ಲ.
4. ಬೆಂಗಳೂರು ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳೀಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಕ್ರಮವಹಿಸತಕ್ಕದ್ದು.
ಈಗಾಗಲೇ ಜನವರಿ 4 ರಿಂದ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ್ದು, ಪ್ರತಿದಿನ ರಾತ್ರಿ 10 ರಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಇತರ ಎಲ್ಲಾ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.