ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2024ರ ಸಾರ್ವಜನಿಕ ರಜೆ ದಿನಾಂಕಗಳನ್ನು ಘೋಷಿಸಿದೆ. ಪ್ರತಿ ತಿಂಗಳು ಬರುವ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಒಟ್ಟು 21 ದಿನಗಳ ಪಬ್ಲಿಕ್ ಹಾಲಿಡೇ ಘೋಷಿಸಿ ಸರಕಾರ ಗುರುವಾರ ಅಧಿಸೂಚನೆ ಪ್ರಕಟಿಸಿದೆ. ಈ ರಜಾಪಟ್ಟಿಗೆ ಸಚಿವ ಸಂಪುಟದ ಅನುಮೋದನೆ ದೊರೆತ ನಂತರ ಆದೇಶ ಹೊರಡಿಸಲಾಗಿದೆ.
ರಜೆ ಪಟ್ಟಿ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಪಬ್ಲಿಕ್ ಹಾಲಿಡೇಗಳು ಲಭ್ಯವಿವೆ. ಆದರೆ ಫೆಬ್ರವರಿ ತಿಂಗಳಲ್ಲಿ ಯಾವುದೇ ವಿಶೇಷ ದಿನಗಳು ಮತ್ತು ಹಬ್ಬ ಹರಿದಿನಗಳು ಇಲ್ಲದ್ದರಿಂದ ಒಂದು ದಿನವೂ ಸರಕಾರಿ ರಜೆ ಇರುವುದಿಲ್ಲ. (ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ) ಅಕ್ಟೋಬರ್ ತಿಂಗಳ 2ರಂದು ಬುಧವಾರ ಗಾಂಧಿ ಜಯಂತಿ/ಮಹಾಲಯ ಅಮವಾಸ್ಯೆ, ಅ.11ರಂದು ಶುಕ್ರವಾರ ಮಹಾನವಮಿ/ಆಯುಧ ಪೂಜೆ, ಅ.17ರಂದು ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಅ.31ರಂದು ನರಕ ಚತುರ್ದಶಿ ರಜೆ ಇರಲಿದೆ.
ನವೆಂಬರ್ ತಿಂಗಳಲ್ಲಿ 3 ದಿನ ಸರಕಾರಿ ರಜೆ ಇದೆ. ನ.1ರಂದು ಶುಕ್ರವಾರ ಕನ್ನಡ ರಾಜ್ಯೋತ್ಸವ, ನ.2 ರಂದು ಶನಿವಾರ ದೀಪಾವಳಿ/ಬಲಿಪಾಡ್ಯಮಿ, ನ.18ರಂದು ಸೋಮವಾರ ಕನಕದಾಸ ಜಯಂತಿ ರಜೆ ಇರುತ್ತದೆ. ಜನವರಿ, ಮಾರ್ಚ್, ಏಪ್ರಿಲ್, ಮೇ, ಸೆಪ್ಟೆಂಬರ್ ತಿಂಗಳಲ್ಲಿ ಎರಡು ಪಬ್ಲಿಕ್ ಹಾಲಿಡೇಗಳಿವೆ. ಜೂನ್, ಜುಲೈ, ಆಗಸ್ಟ್ ಮತ್ತು ಡಿಸೆಂಬರ್‌ನಲ್ಲಿ ತಲಾ 1 ದಿನ ಸರಕಾರಿ ರಜೆ ಲಭ್ಯ.
ಭಾನುವಾರಗಳಂದು ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ ಮತ್ತು ಎರಡನೇ ಶನಿವಾರ ವಿಜಯದಶಮಿ ಹಬ್ಬಗಳಿರುವುದರಿಂದ ಸಾರ್ವಜನಿಕ ರಜೆ ಪಟ್ಟಿಯಲ್ಲಿ ಇವುಗಳನ್ನು ಸೇರಿಸಿಲ್ಲ.
2023ರಲ್ಲಿ ಒಟ್ಟು 19 ಸರಕಾರಿ ರಜೆ ಘೋಷಣೆ ಮಾಡಲಾಗಿತ್ತು. 2024ರಲ್ಲಿ ಎರಡು ಹೆಚ್ಚುವರಿ ಪಬ್ಲಿಕ್ ಹಾಲಿಡೇಗಳಿವೆ.
ಇದನ್ನೂ ಓದಿ: ವಿದ್ಯುತ್ ಅಪಘಾತ ತಡೆಯುವ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ