ಬೆಂಗಳೂರು: ಸಿಎಂ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ನಾಳೆ ಅವರು ತಮ್ಮ ಜೋಳಿಗೆ ತೆರೆಯಲಿದ್ದು, ಜನರಿಗೆ ಹೊರೆಯಾಗದ, ಪ್ರಿಯವಾಗುವ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯವ್ಯಯ ಮಂಡಿಸುವುದು ಖಚಿತ. ಸಿಎಂ ತಮ್ಮ ಜೋಳಿಗೆಯಲ್ಲಿ ಕೆಲ ಅಚ್ಚರಿಗಳನ್ನು ಇಟ್ಟಿರುವ ಸಾಧ್ಯತೆಯೂ ಹೆಚ್ಚಿದೆ.
ಬಜೆಟ್ ಮಂಡನೆಯಾಗುವ ಮುನ್ನಾ ದಿನವಾದ ಇಂದೂ ಕೂಡ ಸಿಎಂ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ದಿನಪೂರ್ತಿ ಅಂತಿಮ ಹಂತದ ಸಭೆ ನಡೆಸುತ್ತಿದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆ ಬಜೆಟ್ ಮಂಡಿಸುವ ಅನಿವಾರ್ಯತೆ, ಜೊತೆಗೆ ವಿಧಾನಸಭೆ ಚುನಾವಣೆ ಮುನ್ನ ಜನರಿಗೆ ಹಿತವಾಗುವ, ಹೊಸತುಗಳಿರುವ ಬಜೆಟ್ ಮಂಡಿಸುವ ಜರೂರತ್ತು ಸಿಎಂ ಅವರಿಗಿದೆ.
1. ಋಣಭಾರ ಪರಿಹಾರ ನೀತಿಗೆ ಚಿಂತನೆ: ಕರ್ನಾಟಕ ಋಣಭಾರ ಪರಿಹಾರ ನೀತಿ ತರಲು ಬೊಮ್ಮಾಯಿ ಚಿಂತನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿನ ಋಣಭಾರಪೀಡಿತ ರೈತರಿಗೆ, ರೈತ ಕೃಷಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗದ ಜನರಿಗೆ ಋಣಭಾರದ ಸಮಸ್ಯೆಗಳ ಪರಿಹಾರಕ್ಕಾಗಿ ಈ ನೀತಿ ರೂಪಿಸಲು ಮುಂದಾಗಿದ್ದಾರೆ. ಕೃಷಿ ಸಾಲ, ಅದರ ವಸೂಲಿ, ಬಡ್ಡಿ ಮನ್ನಾ ಷರತ್ತುಗಳು, ಯಾವಾಗ ರೈತರ ಸಾಲದ ಹೊರೆ ಸರ್ಕಾರವೇ ಹೊತ್ತು ಸಾಲ ಮನ್ನಾ ಮಾಡಬೇಕು ಎಂಬ ವಿಸ್ತೃತ ಮಾರ್ಗಸೂಚಿ ಈ ನೀತಿಯಲ್ಲಿರಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ ಕಾಯಂ ಋಣಭಾರ ಪರಿಹಾರ ಆಯೋಗ ರಚಿಸಲು ಮುಂದಾಗಿದೆ. ಆಯೋಗ ಈ ನಿಟ್ಟಿನಲ್ಲಿನ ಕಾನೂನು ಜಾರಿ ಸಂಬಂಧ ನಿಗಾ ವಹಿಸಲಿದೆ. ಕೇರಳ ಮಾದರಿಯಲ್ಲಿ ಈ ಆಯೋಗ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.
2. ಜಿಎಸ್ಡಿಪಿ ದುಪ್ಪಟ್ಟುಗೊಳಿಸಲು ಪೂರಕ ನೀತಿ: ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಜಿಡಿಪಿಯನ್ನು 17 ಲಕ್ಷ ಕೋಟಿ ರೂ. ನಿಂದ 2025ರ ವೇಳೆಗೆ 34 ಲಕ್ಷ ಕೋಟಿ ರೂ.ಗೆ ದುಪ್ಪಟ್ಟು ಮಾಡುವ ಗುರಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಬಜೆಟ್‌ನಲ್ಲಿ ಇದಕ್ಕೆ ಪೂರಕವಾದ ನೀತಿಗಳನ್ನು ರೂಪಿಸಲು ಮುಂದಾಗಿದ್ದಾರೆ. ಪ್ರಮುಖವಾಗಿ ಉತ್ಪಾದನಾ ವಲಯ, ಕೃಷಿ ವಲಯ ಹಾಗೂ ಸೇವಾ ವಲಯಗಳಿಗೆ ಹೆಚ್ಚಿನ ಅನುದಾನ ನೀಡಲು ಚಿಂತನೆ ನಡೆಸಿದ್ದಾರೆ.
ಕೃಷಿ ವಲಯಗಳಲ್ಲಿ ಜಿಡಿಪಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೂರಕ ಯೋಜನೆಗಳನ್ನು ರೂಪಿಸಲು ಮುಂದಾಗಿದ್ದಾರೆ ಎಂದು ಸಿಎಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜಿಡಿಪಿ ದುಪ್ಪಟ್ಟುಗೊಳಿಸುವ ಬ್ಲೂ ಪ್ರಿಂಟ್ ಅನ್ನು ಅಧಿಕಾರಿಗಳು ಸಿದ್ಧಪಡಿಸಿದ್ದು, ಸಿಎಂ ಬಜೆಟ್‌ನಲ್ಲಿ ಅದನ್ನು ಸೇರ್ಪಡೆಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.
3. ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ: ಈ ಬಾರಿಯ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ. ಚುನಾವಣೆ ಪೂರ್ವ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಇದಾಗಲಿದ್ದು, ರೈತರನ್ನು ಸೆಳೆಯಲು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.
4. ಬಜೆಟ್‌ನಲ್ಲಿ ಬಹುಪಾಲು ಅನುದಾನ ಹಂಚಿಕೆ ನೀರಾವರಿ ಯೋಜನೆಗಳಿಗೆ ಮೀಸಲಿರಿಸಲಾಗುವುದು ಎನ್ನಲಾಗಿದೆ. ಇತ್ತ ಪ್ರತಿಪಕ್ಷಗಳು ನೀರಾವರಿ ಯೋಜನೆ ಸಂಬಂಧ ಹೋರಾಟ ನಡೆಸುತ್ತಿದ್ದು, ಅದಕ್ಕೆ ಕೌಂಟರ್ ಕೊಡಲು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡಲು ಮುಂದಾಗಿದ್ದಾರೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳ ಸಂಬಂಧ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5. ಬೆಂಗಳೂರಿಗೆ ಭರಪೂರ ಕೊಡುಗೆ ಸಾಧ್ಯತೆ: ವಿಧಾನಸಭೆ ಚುನಾವಣೆಯ ಜೊತೆಗೆ ಬಿಬಿಎಂಪಿ ಚುನಾವಣೆಯೂ ಸನಿಹದಲ್ಲಿ ಇದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಬೆಂಗಳೂರಿಗೆ ಹೊಸ ಘೋಷಣೆ, ಯೋಜನೆಗಳನ್ನು ನೀಡುವ ಅನಿವಾರ್ಯತೆಯೂ ಇದೆ. ಹೀಗಾಗಿ, ಸಿಎಂ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಮುಖವಾಗಿ ಬೆಂಗಳೂರಿಗರ ಬಹು ವರ್ಷಗಳ ಬೇಡಿಕೆಯಾದ 'ಬಿ' ಖಾತ ಆಸ್ತಿಗಳನ್ನು 'ಎ' ಖಾತಾಗೆ ಪರಿವರ್ತಿಸುವ ಘೋಷಣೆಯನ್ನು ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ಸರ್ಕಾರ ಮಟ್ಟದಲ್ಲಿ ಸಭೆ ನಡೆಸಿದ್ದು, ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಗರದಲ್ಲಿ 6 ಲಕ್ಷಕ್ಕೂ ಅಧಿಕ 'ಬಿ' ಖಾತ ಆಸ್ತಿಗಳಿದ್ದು, ಅವುಗಳನ್ನು 'ಎ' ಖಾತಾ ಮಾಡುವ ಚಿಂತನೆ ಇದೆ. ಇದರಿಂದ ಸರ್ಕಾರಕ್ಕೆ 2000 ಕೋಟಿ ರೂ. ಆದಾಯ ಸಂಗ್ರಹವಾಗುವುದರ ಜೊತೆಗೆ ಬಿ ಖಾತಾ ಆಸ್ತಿದಾರರನ್ನು ತನ್ನತ್ತ ಸೆಳೆಯುವ ಯೋಚನೆ ಬಿಜೆಪಿ ಸರ್ಕಾರದ್ದು. ಇದು ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ರಾಜಕೀಯ ಲಾಭ ತರಲಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆಯೂ ಸಿಎಂ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ವಿಸ್ತರಣೆ, ಮೇಲ್ಸೇತುವೆ, ಅಂಡರ್ ಪಾಸ್ಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಸಿಎಂ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
6. ಮಹಿಳಾ ಪರ ಬಜೆಟ್ ಘೋಷಣೆ ಸಾಧ್ಯತೆ: ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಿಳೆಯರನ್ನು ಆರ್ಥಿಕ ಸಬಲೀಕರಣ ಸಂಬಂಧ ಕೆಲ ಘೋಷಣೆಗಳನ್ನು ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ವೃದ್ಧರಿಗೆ ಮತ್ತು ಶಾಲೆ, ಕಾಲೇಜು ಮಕ್ಕಳಿಗೆ ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಅದೇ ರೀತಿ ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಬಿ.ಎಂ.ಟಿ.ಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಪಾಸ್ಗಳನ್ನು ವಿತರಿಸುವ ಬಗ್ಗೆನೂ ಚರ್ಚೆ ನಡೆದಿದೆ.
7. ಉತ್ತರ ಕರ್ನಾಟಕ್ಕೆ ಹೆಚ್ಚಿನ ಕೊಡುಗೆ?: ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಿಯವಾಗುವಂಥ ಕೆಲ ಘೋಷಣೆಗಳು ಬೊಮ್ಮಾಯಿ ಬಜೆಟ್‌ನಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಧಾರವಾಡವನ್ನು ಪ್ರತ್ಯೇಕ ನಗರ ಪಾಲಿಕೆ ಮಾಡುವ ಸಂಬಂಧ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆಯನ್ನು ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಸಂಬಂಧ ಒಂಭತ್ತು ಸಚಿವರು ಸಿಎಂಗೆ ಪತ್ರ ಬರೆದು ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಸ್ಥಾಪಿಸುವ ಬಗ್ಗೆ ಮನವಿಪತ್ರ ಸಲ್ಲಿಸಿದ್ದಾರೆ. ಬಜೆಟ್‌ನಲ್ಲಿ ಘೋಷಣೆ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
8. ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ: ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಯೋಜನೆ, ಅನುದಾನ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದರಲ್ಲಿ ಕೆಲ ನೀರಾವರಿ ಯೋಜನೆಯೂ ಒಳಗೊಂಡಿದೆ ಎಂದು ಹೇಳಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಅನುದಾನವನ್ನು ದುಪ್ಪಟ್ಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
9. 7ನೇ ವೇತನ ಆಯೋಗ ಸಮಿತಿ ರಚನೆ ಸಾಧ್ಯತೆ: ಈ ಬಜೆಟ್‌ನಲ್ಲಿ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾದ 7ನೇ ವೇತನ ಆಯೋಗ ಶಿಫಾರಸು ಜಾರಿಗಾಗಿ ಸಿಎಂ ಬೊಮ್ಮಾಯಿ ಸಮಿತಿ ರಚನೆಯ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ.
ಕೇಂದ್ರ ಮಾದರಿಯ ವೇತನ ಪದ್ಧತಿಯನ್ನು ರಾಜ್ಯದಲ್ಲೂ ಜಾರಿಗೊಳಿಸುವ ನಿಟ್ಟಿನಲ್ಲಿ ವೇತನ ಸಮಿತಿ ರಚಿಸುವ ಮೂಲಕ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೊಡುವ ಸಾಧ್ಯತೆ ಹೆಚ್ಚಿದೆ. ಸಮಿತಿ 7ನೇ ವೇತನ ಆಯೋಗದ ಶಿಫಾರಸ್ಸನ್ನು ರಾಜ್ಯದಲ್ಲಿ ಜಾರಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲಿದೆ. ಚುನಾವಣೆ ಮುನ್ನ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡುವ ಇರಾದೆ ಬಿಜೆಪಿ ಸರ್ಕಾರದ್ದಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ: ಸಂಸದ ಪ್ರತಾಪ್ ಸಿಂಹ ವಾಗ್ದಾಳಿ