ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇದೇ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 15ರವರೆಗೆ ಸರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
ಬಳ್ಳಾರಿಯ ಪ್ರಧಾನ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಲಿದೆ. ಪ್ರತಿನಿತ್ಯ ಜಿಲ್ಲಾವಾರು ಪ್ರತಿನಿಧಿಗಳು ಸರದಿ ಅನುಸಾರ ಸತ್ಯಗ್ರಹ ನಡೆಸಿ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಲಿದ್ದಾರೆ. ಬ್ಯಾಂಕಿನ ಕಾರ್ಯ ವ್ಯಾಪ್ತಿಯ ಜಿಲ್ಲಾವಾರು ಸಮಿತಿಯ ಪ್ರತಿನಿಧಿಗಳು ಸೆಪ್ಟೆಂಬರ್ 29ರಿಂದ ಅಕ್ಟೋಬರ್ 15ರವರೆಗೆ ಪ್ರಧಾನ ಕಚೇರಿ ಮುಂದೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಗುರುಮೂರ್ತಿ ಹಾಗೂ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಜೋಷಿ ತಿಳಿಸಿದ್ದಾರೆ.
ಸಂಘದ ಪ್ರಮುಖ 10 ಬೇಡಿಕೆಗಳು:
1. ಮಾರ್ಚ್-2020ರ ವ್ಯವಹಾರದ ಆಧಾರದ ಮೇಲೆ ಅಗತ್ಯಾನುಸಾರ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಮತ್ತು ಬಡ್ತಿ ನೀಡಬೇಕು.
2. ಬ್ಯಾಂಕ್ಗಳಲ್ಲಿ ಅಟೆಂಡರ್ಗಳಾಗಿ ದುಡಿಯುತ್ತಿರುವವರನ್ನು ಕಾರ್ಮಿಕ ನ್ಯಾಯಾಲಯದ(CGIT) ತೀರ್ಪಿನ ಅನುಸಾರ ಕಾಯಂಗೊಳಿಸಬೇಕು.
3. ಹಿಂದಿನ ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿರುವ ಹೊರ ಗುತ್ತಿಗೆ ಆಧಾರದಲ್ಲಿ ಅಟೆಂಡರ್ಗಳನ್ನು ನೇಮಕಗೊಳಿಸುವ ಪದ್ಧತಿಯನ್ನು ನಿಲ್ಲಿಸಬೇಕು.
4. ಪ್ರೇರಕ ಬ್ಯಾಂಕಿನಲ್ಲಿರುವ ಸಿಬ್ಬಂದಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗೂ ವಿಸ್ತರಿಸಬೇಕು.
5. ನಿವೃತ್ತಿ ಹೊಂದುವ ಸಿಬ್ಬಂದಿಗೆ ಆ ದಿನವೇ ನಿವೃತ್ತಿ ಸೌಲಭ್ಯಗಳನ್ನು ನೀಡಿ ಬೀಳ್ಕೊಡಬೇಕು.
6. ವರ್ಗಾವಣೆ ನೀತಿ ವೈಜ್ಞಾನಿಕವಾಗಿ ಜಾರಿಯಾಗಬೇಕು.
7. ಅಟೆಂಡರ್ಗಳಿಗೆ ಎಲ್ಲಾ ರಜಾ ದಿನಗಳಲ್ಲಿಯೂ ವೇತನ ಪಾವತಿಸಬೇಕು.
8. ಕೋವಿಡ್-19 ಸಂದರ್ಭದಲ್ಲಿ ಕೊರೊನಾ ವೈರಸ್ ಪೀಡಿತರಿಗೆ ಮತ್ತು ಕ್ವಾರಂಟೈನ್ನಲ್ಲಿರುವ ಸಿಬ್ಬಂದಿಗೆ ವೇತನ ಸಹಿತ ರಜೆ ಮಂಜೂರು ಮಾಡಬೇಕು.
9. ನಿವೃತ್ತಿ ಹೊಂದಿದ ಸಿಬ್ಬಂದಿಗೆ ಎಲ್ಲಾ ನಿವೃತ್ತಿ ಸೌಲಭ್ಯಗಳನ್ನು ಒದಗಿಸುವುದು.
10. ಬ್ಯಾಂಕಿನ ಹತ್ತು ಶಾಖೆಗಳನ್ನು ಮುಚ್ಚುವ ನಿರ್ಧಾರವನ್ನು ಆಡಳಿತ ಮಂಡಳಿ ಹಿಂಪಡೆಯಬೇಕು.