ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಇಂದು ಕೂಡ 1,105 ಹೊಸ ಕೇಸ್ಗಳು ಪತ್ತೆಯಾಗಿವೆ. ಅಲ್ಲದೆ 19 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,226 ಆಗಿದ್ದು, 295 ಜನರು ಸಾವನ್ನಪ್ಪಿದ್ದಾರೆ.
ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಜೋರಾಗಿದ್ದು, ಇಂದು 1,105 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 14,295ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕದಲ್ಲಿ ಬರೋಬ್ಬರಿ 268 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ರಾಜ್ಯದಲ್ಲಿ 7,683 ಸೋಂಕಿತರು ಗುಣಮುಖರಾಗಿದ್ದು, 6,382 ಸಕ್ರಿಯ ಪ್ರಕರಣಗಳಿವೆ. ಈವರೆಗೆ 6,05,159 ಜನರಿಗೆ ಕೊರೊನಾ ಪರೀಕ್ಷೆ ಮಾಡಿದ್ದು, ಅದರಲ್ಲಿ 5,75,337 ಮಂದಿಯ ವರದಿ ನೆಗೆಟಿವ್ ಬಂದಿದೆ. 14,295 ಮಂದಿಯ ವರದಿ ಪಾಸಿಟಿವ್ ಬಂದಿದೆ. 42,847 ಜನರ ಮೇಲೆ ನಿಗಾ ಇಡಲಾಗಿದೆ.
ಕೊರೊನಾ ಆತಂಕಕ್ಕೊಳಗಾಗಿರುವ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ವಿಭಾಗ ಆಪ್ತ ಸಮಾಲೋಚನೆ ನಡೆಸುತ್ತಿದೆ. ಇಂದು 1,630 ಸೋಂಕಿತರಿಗೆ ಸಮಾಲೋಚನೆ ಮಾಡಿದ್ದು, ಈವರೆಗೆ ಒಟ್ಟು 1,72,707 ಮಂದಿ ಈ ಸೇವೆ ಪಡೆದುಕೊಂಡಿದ್ದಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಜ್ವರ-ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಕಂಡು ಬಂದರೆ 14410 ಆಪ್ತ ಮಿತ್ರ ಆರೋಗ್ಯ ಸಹಾಯವಾಣಿಗೆ ಕರೆ ಮಾಡಬಹುದು.