ಬೆಂಗಳೂರು: ಕನ್ನಡ ವಿರೋಧಿ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು, ಕನ್ನಡಿಗರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಂಗಳೂರಿನಿಂದ ಬೆಳಗಾವಿಗೆ ಜಾಥಾ ಹೊರಟಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯದ ವಿವಿಧ ಭಾಗಗಳ ಕಾರ್ಯಕರ್ತರು ಸೇರಿ ನಾಳೆ ಮಹಾರಾಷ್ಟ್ರದ ಗಡಿ ದಾಟಲು ನಿರ್ಧರಿಸಿದ್ದು, ಇಂದು ಮೇಖ್ರಿ ಸರ್ಕಲ್ನಿಂದ ಬೆಳಗಾವಿ ಕಡೆಗೆ ಜಾಥಾ ಹೊರಟಿದ್ದಾರೆ.
ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬೆಳಗಾವಿಯಲ್ಲಿ ಶಿವಸೇನೆ ಹಾಗೂ ಎಮ್ಇಎಸ್ ಸಂಘಟನೆಗಳು ಕನ್ನಡದ ಶಾಲು ಹಾಗೂ ಬಾವುಟ ಹಾಕಿಕೊಂಡವರಿಗೆ ಹೊಡೀತೀವಿ ಎಂದು ಸವಾಲು ಹಾಕಿದ್ದಾರೆ. ಈ ಸವಾಲು ಸ್ವೀಕರಿಸಿ ಮಹಾರಾಷ್ಟ್ರ ಗಡಿ ಮುಟ್ಟುವ ಕೆಲಸವನ್ನು ಬೆಳಗಾವಿ ಮುಖಾಂತರ ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟ ಎಂಇಎಸ್ ಪುಂಡ : ಬೆಳಗಾವಿಯಲ್ಲಿ ನಾಡದ್ರೋಹಿಯ ಉದ್ಧಟತನ
ಸಾಂಕೇತಿಕವಾಗಿ ಬೆಂಗಳೂರಿನಿಂದ ಜಾಥಾ ಆರಂಭ ಮಾಡಲಾಗಿದೆ. ಸಂಜೆ ವೇಳೆ ರಾಜ್ಯದ ಮೂಲೆ ಮೂಲೆಯಿಂದ ಕನ್ನಡಪರ ಕಾರ್ಯಕರ್ತರು ಒಟ್ಟಿಗೆ ಬೆಳಗಾವಿಯಲ್ಲಿ ಸೇರಲಿದ್ದೇವೆ. ನಾಳೆ ಬೆಳಗ್ಗೆ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಲಿದ್ದೇವೆ ಎಂದರು.
ಕೆಲ ಪಕ್ಷಗಳು ಹಾಗೂ ಸಂಘಟನೆಗಳು ಬೆಳಗಾವಿ ಗಡಿಭಾಗದ ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿದೆ. ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳು ಕರ್ನಾಟಕ ನೆಲದಲ್ಲಿ ಉದ್ಧಟತನ ತೋರುತ್ತಿವೆ. ಆದರೆ ಮತಬ್ಯಾಂಕ್ಗಾಗಿ ನಮ್ಮ ಯಾವುದೇ ರಾಜಕೀಯ ಪಕ್ಷಗಳೂ ಅವರ ವಿರುದ್ಧ ಕ್ರಮಕೈಗೊಳ್ಳದೇ ಇರುವುದು ನಾಡಿನ ದುರಂತ ಎಂದರು.