ಬೆಂಗಳೂರು: ಜನಸಂದಣಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಶವ ಪ್ಯಾಕಿಂಗ್ ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದಡಿ ಹೆಣ್ಣೂರು ಪೊಲೀಸರಿಗೆ ಕರ್ನಾಟಕ ರಕ್ಷಣಾ ವೇದಿಕೆ ದೂರು ನೀಡಿದೆ.
ವೇದಿಕೆ ಪರವಾಗಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೆಣ್ಣೂರು ಕ್ರಾಸ್ ಸಮೀಪದ ಬಾಟ ಮಾರಾಟ ಮಳಿಗೆ ಬಳಿ ಗೋದಾಮಿನಲ್ಲಿ ಕೆಲವರು ಮೃತ ದೇಹಗಳನ್ನು ತಂದು ಬೇರೆಡೆಗೆ ಅಕ್ರಮವಾಗಿ ಸಾಗಾಟ ಮಾಡುವ ದಂಧೆ ನಡೆಸುತ್ತಿದ್ದಾರೆ. ಈ ಕುರಿತು ಜಾಗದ ಮಾಲೀಕರನ್ನು ವಿಚಾರಿಸಿದಾಗ ಆಸ್ಪತ್ರೆಯಿಂದ ಶವಗಳನ್ನು ತಂದು ಪ್ಯಾಕಿಂಗ್ ಮಾಡಿ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ ಎಂದಿದ್ದಾರೆ. ಜನವಸತಿ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಶವಗಳನ್ನು ಸಾಗಾಣಿಕೆ ದಂಧೆ ನಡೆಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರವೇ ಮುಖಂಡರು ಆಗ್ರಹಿಸಿದ್ದಾರೆ.
ಯಲಹಂಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಣಿಪುರ ಮೂಲದ ವ್ಯಕ್ತಿ ಮೃತಪಟ್ಟಿದ್ದ. ಶವವನ್ನು ಪಾಲಕರಿಗೆ ಬುಧವಾರ ಪೊಲೀಸರು ಹಸ್ತಾಂತರಿಸಿದ್ದರು. ವಿಮಾನ ನಿಲ್ದಾಣಕ್ಕೆ ಸಾಗಿಸಲು ಹೆಣ್ಣೂರು ಕ್ರಾಸ್ ಬಳಿಗೆ ಶವ ತಂದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೃತ ವ್ಯಕ್ತಿ ಕುಟುಂಬದ ವಕೀಲರಿಗೆ ಹಾಗೂ ಕರವೇ ಕಾರ್ಯಕರ್ತರಿಗೆ ದಾಖಲೆಗಳ ಸಮೇತ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ.