ಬೆಂಗಳೂರು: ಸಮಾಜದ ನಾನಾರಂಗದ ವಿವಿಧ ಸಾಧಕರಿಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾವಿರಾರು ಅನಾಥ ಶವಗಳನ್ನು ಮಣ್ಣುಮಾಡಿರುವ ದೊಮ್ಮಲೂರು ಮುನಿಯಪ್ಪ, 30 ವರ್ಷ ಪೌರಕಾರ್ಮಿಕರಾಗಿ ದುಡಿದ ರತ್ನಮ್ಮ ಶಿವಪ್ಪ, ಸಿನಿಮಾ ಕ್ಷೇತ್ರದ ಡೈನಾಮಿಕ್ ಹೀರೋ ದೇವರಾಜ್, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ಪ್ಯಾರಾ ಒಲಂಪಿಕ್‌ನಲ್ಲಿ ಚಿನ್ನದ ಪದಕ ಪಡೆದ ಬೆಂಗಳೂರಿನ ಕೆ.ಗೋಪಿನಾಥ್, ಶಿವಮೊಗ್ಗದ ಯೋಗ ಶಿಕ್ಷಕ ಶ್ರೀಕಂಠ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ಯಾದಗಿರಿ ಜಿಲ್ಲೆಯ ಮಹದೇವಪ್ಪ ಕಡೆಚೂರು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ನೀರಾವರಿ ತಜ್ಞ, ಬೆಳ್ಳಂದೂರು ವರ್ತೂರು ಕೆರೆಗಳ ಮೇಲೆ ಕೆಲಸ ಮಾಡಿದ ಕ್ಯಾಪ್ಟನ್ ರಾಜಾರಾವ್, ಧಾರವಾಡದಲ್ಲಿ ಬಡವರಿಗಾಗಿ ಆಸ್ಪತ್ರೆ ಆರಂಭಿಸಿ ಒಂದು ಲಕ್ಷಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿ ಬಡಜನರ ವೈದ್ಯರೆಂದೇ ಹೆಸರುವಾಸಿಯಾದ ಡಾ. ಶಿವನಗೌಡ ರುದ್ರಗೌಡ, ಕಾರ್ಗಿಲ್ ಯುದ್ಧದಲ್ಲಿ 60 ಗಂಟೆಕಾಲ ಸಂಕಷ್ಟ ಅನುಭವಿಸಿ, 21 ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದು ತಾಯ್ನಾಡಿಗೆ ಮರಳಿದ ಕ್ಯಾಪ್ಟನ್ ನವೀನ್ ನಾಗಪ್ಪ, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಹೆಸರುವಾಸಿಯಾದ, ಪರ್ವ ನಾಟಕ ನಿರ್ದೇಶನ ಮಾಡಿರುವ ಪ್ರಕಾಶ್ ಬೆಳವಾಡಿ, ಮೀನುಗಾರರ ನಾಯಕ, ಮಾಜಿ ಶಾಸಕ ಮಂಗಳೂರಿನ ಬೈಕಂಪಾಡಿ ರಾಮಚಂದ್ರ ಹಾಗೂ ಕಿಮ್ಸ್ ಮೆಡಿಕಲ್ ಕಾಲೇಜು ನಿರ್ದೇಶಕ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಮ್‌ಕೆ.ಸುದರ್ಶನ್, ಅದಮ್ಯ ಚೀತನದ ಸಂಸ್ಥಾಪಕಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಪ್ರಶಸ್ತಿ ನೀಡಲಾಯಿತು.
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮಾತನಾಡಿ, 60 ವರ್ಷ ಕಲಾವಿದರು ಬದುಕೋದೇ ಕಷ್ಟ. ನಾವು ಊಟ ಇಲ್ದೇ ಊರೂರು ಅಲೆದಾಡೋದು, ನಿದ್ದೆ ಬಿಟ್ಟು ಕಲೆ ಮಾಡೋರು, ಇದರಿಂದ 60 ವರ್ಷ ಬದುಕೋದು ಕಷ್ಟ. ಹಾಗಾಗಿ, ರಾಜ್ಯೋತ್ಸವ ಪ್ರಶಸ್ತಿ ಮಿತಿಯನ್ನು 40ಕ್ಕೆ ಇಳಿಸಿ ಎಂಬುದು ಸರ್ಕಾರಕ್ಕೆ ನನ್ನ ಮನವಿ. ಪ್ರಶಸ್ತಿ ತಗೊಂಡ ಮೇಲೆ ಇನ್ನಷ್ಟು ಕೆಲಸ ಮಾಡಲು ಉತ್ಸಾಹ ಬರುತ್ತದೆ. ಇನ್ನೊಂದು ವರ್ಷ ಬಿಟ್ಟಿದ್ರೆ ಪ್ರಶಸ್ತಿ ಮೌಲ್ಯ ಐದು ಲಕ್ಷ ಇರೋವಾಗ್ಲೆ ಕೊಡಬಹುದಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಪ್ರಶಸ್ತಿ ಪುರಸ್ಕೃತರಾದ ಅಜ್ಜಂಪುರ ಮಂಜುನಾಥ್ ಮಾತನಾಡಿ, ಸತ್ಯಕ್ಕೆ ಯಾವಾಗಲೂ ಗೆಲುವು ಸಿಗಬೇಕು. ಕತ್ತಲಿನಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ನಡೆಯಬೇಕೆಂದು ನಮ್ಮ ಪರಂಪರೆ ಹೇಳುತ್ತದೆ. ಎರಡು ವರ್ಷದ ಹಿಂದೆ ತಾಯಿ ಚಾಮುಂಡೇಶ್ವರಿಗೆ ಕೈಮುಗಿಯಲು ಇಷ್ಟ ಇಲ್ಲದವರೂ ದಸರಾ ಉದ್ಘಾಟನೆ ಮಾಡಿದ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಕನ್ನಡ ಒಂದು ತಾಯಿ ಎಂಬ ಭಾವನೆ ಈಗ ಬಂದಿದೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರವನ್ನು ಹೊಗಳಿದರು.
ಪ್ರಕಾಶ್ ಬೆಳವಾಡಿ ಮಾತನಾಡಿ, ಸಲಹಾ ಸಮಿತಿಯ ಕಣ್ಣಿಗೆ ನಾವು ಬಿದ್ದಿದ್ದು ಅದೃಷ್ಟ. 60-70 ನಾಟಕಗಳನ್ನು ನಿರ್ದೇಶನ ಮಾಡಿದ್ದೇನೆ. ಆದರೆ ಈಗ ಪ್ರಾತಿನಿಧ್ಯ ಸಿಕ್ಕಿದೆ. ರಂಗಭೂಮಿ ನಟರ ಮಾಧ್ಯಮ. ನಿರ್ದೇಶಕ ಎಂದು ಇರಲಿಲ್ಲ. ಮುಖ್ಯ ಪಾತ್ರದವರನ್ನು ಮಾತ್ರ ಗುರುತಿಸಲಾಗುತ್ತಿತ್ತು. ಈಗ ನಿರ್ದೇಶಕರನ್ನು ಗುರುತಿಸಿದ್ದು ಸಂತೋಷದ ವಿಷಯ ಎಂದರು.