ಬೆಂಗಳೂರು: ರಾಜ್ಯದಲ್ಲಿನ ಹವಾಮಾನ ಮತ್ತು ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಡಿಯೋ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒಗಳ ಜೊತೆಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುವರು. ಬಳಿಕ ಮುಂದಿನ ಕ್ರಮಗಳ ಬಗ್ಗೆ ತಿಳಿಸಲಿದ್ದಾರೆ.
ವಿಡಿಯೋ ಸಂವಾದದಲ್ಲಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳು, ಕಂದಾಯ ಸಚಿವರು ಹಾಗು ಕೃಷಿ ಸಚಿವರು ಸೇರಿದಂತೆ ಹಿರಿಯ ಸಚಿವರುಗಳು ಭಾಗಿಯಾಗಲಿದ್ದಾರೆ. ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕರಾವಳಿಯ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಸ್ಥಳೀಯ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಈ ಎಲ್ಲ ಪರಿಸ್ಥಿತಿಗಳ ಬಗ್ಗೆ ಮುಖ್ಯಮಂತ್ರಿಗಳು ವಿಡಿಯೋ ಸಂವಾದದಲ್ಲಿ ಅವಲೋಕನ ಮಾಡಲಿದ್ದಾರೆ.
ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡು ಭಾಗದಲ್ಲಿ ಭಾರಿ ಮಳೆ ಸಂಭವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರಿ ಮಳೆಯ ಕಾರಣದಿಂದಾಗಿ ಹಠಾತ್ ಪ್ರವಾಹ ಸಂಭವಿಸಬಹುದೆಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಂಭವನೀಯ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ. ಅತಿವೃಷ್ಟಿ ಮತ್ತು ಪ್ರವಾಹದ ಮುನ್ಸೂಚನೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದಾರೆ. ಪೋಷಕರು ಮತ್ತು ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಜಿಲ್ಲಾಧಿಕಾರಿಗಳ ಆದೇಶಗಳನ್ನು ಪಾಲನೆ ಮಾಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.
ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದಿರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಉಡುಪಿಯ ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ. ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಜಿಲ್ಲಾಡಳಿತ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಗುಡ್ಡ ಕುಸಿಯುವ ಸಂಭವ ಇರುತ್ತದೆ. ಆದ್ದರಿಂದ ಪ್ರವಾಸಿಗರು ಮತ್ತು ಗುಡ್ಡದ ಮೇಲೆ ವಾಸಿಸುವ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಜಲಪಾತ ವೀಕ್ಷಣೆ ಅಥವಾ ಚಾರಣ ಕೈಗೊಳ್ಳಬಾರದು. ಜಿಲ್ಲಾಡಳಿತ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಗಾ ಇಡಬೇಕು ಎಂದು ಹೆಬ್ಬಾಳ್ಕಕರ್ ತಿಳಿಸಿದ್ದಾರೆ.
ಚಿಕ್ಕಮಗಳೂರಲ್ಲಿ ಮಳೆ: ಮಲೆನಾಡಲ್ಲಿ ಮಳೆ ಆರ್ಭಟ ಇಂದೂ ಕೂಡ ಮುಂದುವರೆದಿದೆ. ಭಾರಿ ಮಳೆಗೆ ಈರಯ್ಯ ಎಂಬವರಿಗೆ ಸೇರಿದ ಮನೆ ಕುಸಿದಿದೆ. ಮೂಡಿಗೆರೆ ತಾಲೂಕಿನ ಸಾಲುಮರ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಮನೆ ಗೋಡೆ, ಮೇಲ್ಚಾವಣಿ ಕುಸಿದಿದೆ. ಪ್ರವಾಸಿಗರು ಸ್ವಲ್ಪ ದಿನ ಕಾಫಿನಾಡಿನ ಕಡೆಗೆ ಪ್ರವಾಸ ಕೈಬಿಡುವುದು ಒಳ್ಳೆಯದು ಎಂದು ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: Krishna Byre Gowda: ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ, ಅಧಿಕಾರಿಗಳಿಗೆ ನಿರ್ದೇಶನ