ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತಂದಿದ್ದ ಕರ್ನಾಟಕ ಪೊಲೀಸರು ಇದೀಗ ಮಹಾರಾಷ್ಟ್ರ ಪೊಲೀಸರ ಜೊತೆಗೂಡಿ ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಪತ್ತೆಗೆ ಮುಂದಾಗಿದ್ದಾರೆ.
ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದರೆ ಗೌರಿ ಲಂಕೇಶ್ ಹಣೆಗೆ ಗುಂಡು ಹೊಡೆದಿದ್ದ ಪಿಸ್ತೂಲ್ ಈವರೆಗೂ ಪತ್ತೆಯಾಗದಿರುವುದು ದೊಡ್ಡ ತಲೆನೋವಾಗಿತ್ತು. ಆರೋಪಿಗಳು ಗೌರಿಗೆ ಗುಂಡು ಹೊಡೆದ ಮೇಲೆ ಮಹಾರಾಷ್ಟ್ರದ ಪಾನ್ವೆಲ್ ನದಿಯಲ್ಲಿ ಬಿಸಾಕಿರುವುದಾಗಿ ಹೇಳಿಕೆ ನೀಡಿದ್ದ ಮೇರೆಗೆ ಎಸ್ಐಟಿ ಹಾಗೂ ಮಹಾರಾಷ್ಟ್ರ ಪೊಲೀಸರು ಜೊತೆ ನದಿಯಲ್ಲಿ ಪಿಸ್ತೂಲ್ ಪತ್ತೆ ಮಾಡಲು ಖಾಸಗಿ ಕಂಪೆನಿಯೊಂದಿಗೆ ಮಾತುಕತೆ ನಡೆಸಿದೆ.
ಮಹಾರಾಷ್ಟ್ರದಲ್ಲಿ ಹತ್ಯೆಯಾಗಿದ್ದ ದಾಬೋಲ್ಕರ್ ಹಾಗೂ ಪನ್ಸಾರೆ ಹಾಗೂ ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಒಂದೇ ಎಂದು ಹೇಳಲಾಗಿದೆ. ಹೀಗಾಗಿ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಬಹಳ ಮುಖ್ಯ ಸಾಕ್ಷಿಯಾಗಲಿದೆ. ಸದ್ಯ ಆರೋಪಿಗಳು ನೀಡಿದ ಹೇಳಿಕೆ ಜಾಡು ಹಿಡಿದು ಹೊರಟಿರುವ ಪೊಲೀಸರು ನದಿಯಲ್ಲಿ ಬಿದ್ದಿರುವ ಪಿಸ್ತೂಲ್ ಹೊರತೆಗೆಯಲು ಮೂರು ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದು, ಸದ್ಯ ದುಬೈ ಮೂಲದ ಕಂಪೆನಿಯೊಂದು ಪಿಸ್ತೂಲ್ ಹೊರ ತೆಗೆಯುವ ಭರವಸೆ ನೀಡಿದೆ.
ಎನ್ವಿಟೆಕ್ನಿಂದ ಮೂರು ಹಂತಗಳಲ್ಲಿ ಶೋಧ ನಡೆಸಿ ಪಿಸ್ತೂಲ್ ತೆಗೆಯುವ ಭರವಸೆ ನೀಡಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶೋಧಕಾರ್ಯ ನಡೆಸಲಿದೆ.
ಈ ಶೋಧಕಾರ್ಯಕ್ಕೆ 11 ಇಲಾಖೆಗಳ ಎನ್ಓಸಿ ಅಗತ್ಯವಾಗಿದೆ. ಜಲಸಂಪನ್ಮೂಲ ಇಲಾಖೆ, ಅರಣ್ಯ ಇಲಾಖೆ, ಫೈರ್ ಮತ್ತು ಪೊಲೀಸ್ ಇಲಾಖೆ ಸೇರಿ 12 ಇಲಾಖೆಗಳು ಅನುಮತಿ ಪಡೆದುಕೊಂಡಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಆಪರೇಷನ್ ಕಾರ್ಯಾರಂಭವಾಗಲಿದೆ.