ಬೆಂಗಳೂರು : ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಪ್ರಮಾಣವಚನ ಬೋಧಿಸಿದರು.
ಪ್ರತಿಜ್ಞಾವಿಧಿ ಸ್ವೀಕಾರದ ಬಳಿಕ ನೂತನ ರಾಜ್ಯಪಾಲರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಸಮಾರಂಭದಲ್ಲಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದಂತೆ ಗಣ್ಯರು ಇದ್ದರು.
ನೂತನ ರಾಜ್ಯಪಾಲರ ಪರಿಚಯ :
ರಾಜ್ಯದ 19 ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿರುವ ಥಾವರ್ ಚಂದ್ ಗೆಹ್ಲೋಟ್ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ನಗ್ಡಾದಲ್ಲಿ 1948ರ ಮೇ 18ರಂದು ದಲಿತ ಕುಟುಂಬದಲ್ಲಿ ಜನಿಸಿದರು. 73 ವರ್ಷದ ಗೆಹ್ಲೋಟ್, ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದಿದ್ದಾರೆ. ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದ ಅವರು, ಪಕ್ಷದಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. 1977-1980 ರವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿದ್ದರು. 1985ರಲ್ಲಿ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾಗಿದ್ದರು.
ಮಧ್ಯಪ್ರದೇಶ ವಿಧಾನಸಭೆಗೆ 1980, 1990, 1993ರಲ್ಲಿ ಚುನಾಯಿತರಾಗಿದ್ದರು. 1986 ರಿಂದ 1987ರವರೆಗೆ ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. 1996 ರಿಂದ 2009ರವರೆಗೂ ಮಧ್ಯಪ್ರದೇಶದ ಶಾಜಾಪುರ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕರ್ನಾಟಕದ ನಂಟು ಹೊಸತಲ್ಲ. ಪಕ್ಷ ಅವರಿಗೆ 2006 ಮತ್ತು 2014ರಲ್ಲಿ ಕರ್ನಾಟಕದ ಉಸ್ತುವಾರಿಯ ಜವಾಬ್ದಾರಿ ನೀಡಿತ್ತು. ಇದೀಗ ಕರ್ನಾಟಕದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.