ಬೆಂಗಳೂರು : ರಾಜ್ಯದಲ್ಲಿ ಬೆಳೆಯುವ ಬೆಂಗಳೂರು ರೋಸ್ ಆನಿಯನ್ ರಫ್ತು ನಿರ್ಬಂಧ ತೆಗೆಯುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ತೋಟಗಾರಿಕೆ, ಪೌರಾಡಳಿತ ಹಾಗೂ ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ಈ ಸಂಬಂಧ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದು, ರೈತರಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ರಫ್ತು ನಿರ್ಬಂಧ ಸಡಿಲಗೊಳಿಸುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರು ರೋಸ್ ಈರುಳ್ಳಿ ವಿಶೇಷ ತಳಿಯಾಗಿದೆ. ಸಣ್ಣ ಹಿಡುವಳಿ ರೈತರು ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಇದನ್ನು ಬೆಳೆಯುತ್ತಿದ್ದಾರೆ. ಸ್ಥಳೀಯ ಮಾರ್ಕೆಟ್‍ನಲ್ಲಿ ಇದಕ್ಕೆ ಬೇಡಿಕೆ ಕಡಿಮೆ ಇದೆ. ರಫ್ತು ಮಾಡುವುದೊಂದೆ ರೈತರಿಗೆ ಇರುವ ಪರಿಹಾರ. ನಿರ್ಬಂಧ ಸಡಿಲಿಸಿದರೆ ರೈತರು ಹಾಗೂ ರಫ್ತುದಾರರು ನಿರಾಳರಾಗುತ್ತಾರೆ. ನಿರ್ಬಂಧ ಹೇರಿರುವ ಕಾರಣ ರೈತರು ಸಹಜವಾಗಿ ಆತಂಕಕ್ಕೆ ಈಡಾಗಿದ್ದಾರೆ. ರಫ್ತಿಗೆ ಅವಕಾಶ ಮಾಡಿಕೊಡುವುದರ ಜೊತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಮಾಡಿಕೊಟ್ಟರೆ ಬೆಂಗಳೂರು ರೋಸ್ ಆನಿಯನ್‍ಗೆ ಇನ್ನಷ್ಟು ಉತ್ತೇಜನ ಸಿಗಲಿದೆ.
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ರಫ್ತು ನಿಷೇಧಿಸಿದ್ದು, ಆ ಪಟ್ಟಿಯಲ್ಲಿ ಬೆಂಗಳೂರು ರೋಸ್ ಆನಿಯನ್ ಕೂಡ ಸೇರಿಕೊಂಡಿದೆ. ಆದರೆ ಬೆಂಗಳೂರು ರೋಸ್ ಆನಿಯನ್‍ಗೆ ಸ್ಥಳೀಯವಾಗಿ ಬೇಡಿಕೆ ಕಡಿಮೆ ಇದೆ. ಹಾಗಾಗಿ ರಫ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರದಲ್ಲಿ ಸಚಿವರು ಮನವಿ ಮಾಡಿದ್ದಾರೆ.