ಬೆಂಗಳೂರು: ಮಾರಕ ಕೊರೊನಾ ಸೋಂಕು ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಅಟ್ಟಹಾಸ ಮೆರೆಯಲಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ವಿಧಿಸಿರುವ ಲಾಕ್ಡೌನ್ ಮುಂದುವರೆಸುವಂತೆ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಹಿನ್ನೆಲೆ ಮೇ ಅಂತ್ಯದವರೆಗೂ ಲಾಕ್ಡೌನ್ ವಿಸ್ತರಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಇಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ನ ಮಹತ್ವದ ಸಭೆ ನಡೆದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚುವ ಸಾಧ್ಯತೆ:
ರಾಜಧಾನಿ ಬೆಂಗಳೂರಿನಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಸೋಂಕು ಸದ್ಯಕ್ಕೆ ಸ್ವಲ್ಪ ಇಳಿಮುಖವಾಗುವ ಲಕ್ಷಣ ಕಾಣುತ್ತಿದೆ. ಬಿಗಿ ಕ್ರಮ ಮುಂದುವರೆದರೆ ಜೂನ್ ಅಂತ್ಯದ ವೇಳೆಗೆ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರಲಿದೆ. ಆದರೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಆರ್ಭಟ ಮುಂದುವರೆಯಲಿದ್ದು, ಜೂನ್ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೇ ದಿನವೊಂದಕ್ಕೆ ಮೂವತ್ತು ಸಾವಿರದಷ್ಟು ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
2 ವಾರಗಳ ಕಾಲ ಲಾಕ್ಡೌನ್ ಮುಂದುವರೆಸಲು ಸೂಚನೆ:
ಈಗ ಲಾಕ್ಡೌನ್ ವಿಧಿಸಿರುವುದು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿದ್ದರೂ ಕೊರೊನಾ ಚೈನ್ ಲಿಂಕ್ ತುಂಡರಿಸಲು ಇದು ಸಾಲದು. ಹೀಗಾಗಿ ಈಗ ವಿಧಿಸಿರುವ ಲಾಕ್ಡೌನ್ ಕನಿಷ್ಠ ಎರಡು ವಾರಗಳ ಕಾಲ ಮುಂದುವರೆಸಿ ನಂತರ ಪುನಃ ತೀರ್ಮಾನ ಕೈಗೊಳ್ಳಬಹುದು ಎಂದು ತಜ್ಞರ ಸಮಿತಿ ಹೇಳಿದೆ.
ರಾಜಧಾನಿಯಲ್ಲಿ ಚಿಕಿತ್ಸಾ ಸೌಲಭ್ಯ ತಕ್ಕಮಟ್ಟಿಗೆ ಚೆನ್ನಾಗಿದೆಯಾದರೂ ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಗ್ರಾಮೀಣ ವೈದ್ಯಕೀಯ ವ್ಯವಸ್ಥೆಗೆ ಕಷ್ಟವಾಗಲಿದೆ. ಹೀಗಾಗಿ ಲಾಕ್ಡೌನ್ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿಯೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಅದರ ಸೂಚನೆ ಎಂದು ಮೂಲಗಳು ಹೇಳಿವೆ.
ಸದ್ಯ ರಾಜ್ಯದ ಕೆಲ ಜಿಲ್ಲೆಗಳಲ್ಲಿ ವಾರಕ್ಕೆ ನಾಲ್ಕು ದಿನ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿದ್ದು, ದಿನ ಬಳಕೆಯ ವಸ್ತುಗಳನ್ನು ಖರೀದಿಸಲು 3 ದಿನಗಳ ಕಾಲ ಬೆಳಗಿನ ಜಾವ ಅವಕಾಶ ನೀಡಲಾಗಿದೆ. ಇದೇ ಮಾದರಿಯನ್ನು ಎಲ್ಲಾ ಜಿಲ್ಲೆಗಳಲ್ಲಿ ಅಳವಡಿಸಿಕೊಂಡರೆ ಮತ್ತು ವಾರದಲ್ಲಿ ಮೂರು ದಿನಗಳ ಬದಲು ಎರಡು ದಿನಗಳ ಕಾಲ ಬೆಳಗಿನ ಹೊತ್ತು ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಜನರಿಗೆ ಅವಕಾಶ ಮಾಡಿಕೊಟ್ಟರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಬಹುದು.
ಮೂರನೇ ಅಲೆಯ ನಿರ್ವಹಣೆಗೆ ಸಿದ್ಧತೆ:
ಹಾಗೆಯೇ ಎರಡನೇ ಅಲೆಯ ಲಾಕ್ಡೌನ್ ಪರಿಣಾಮಕಾರಿಯಾಗಿದ್ದಷ್ಟೂ ಬರಲಿರುವ ಮೂರನೇ ಅಲೆಯ ನಿರ್ವಹಣೆಗೆ ಸಿದ್ಧತೆ ಎಂಬಂತೆ ಭಾವಿಸಬೇಕು . ಹಾಗಾದಾಗ ಮಾತ್ರ ಕೊರೊನಾ ದಾಳಿಯನ್ನು ತಡೆಯಲು ಸಾಧ್ಯ ಎಂಬುದು ತಜ್ಞರ ವರದಿಯ ಸಾರಾಂಶ.
ಈ ಹಿನ್ನೆಲೆ ಸರ್ಕಾರದ ಟಾಸ್ಕ್ ಫೋರ್ಸ್ ಇಂದು ಮಹತ್ವದ ಸಭೆ ನಡೆಸುತ್ತಿದ್ದು, ಲಾಕ್ಡೌನ್ ಮುಂದುವರೆಸುವ ಕುರಿತು ತಜ್ಞರ ಸಮಿತಿಯ ಸಲಹೆಯನ್ನು ಪರಿಶೀಲಿಸಲಿದೆ. ಆನಂತರ ಅದು ಮುಖ್ಯಮಂತ್ರಿಗಳಿಗೆ ವರದಿ ನೀಡಲಿದ್ದು, ಈ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಇನ್ನು ಹಲವು ಸಚಿವರೂ ಸಹ ಲಾಕ್ಡೌನ್ ವಿಸ್ತರಣೆ ಮಾಡುವುದು ಸೂಕ್ತ ಎಂಬ ಮಾತುಗಳನ್ನು ಆಡಿದ್ದಾರೆ. ಅದೇ ರೀತಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಕೂಡ ಎರಡು ತಿಂಗಳು ಲಾಕ್ಡೌನ್ ಮಾಡಿದರೆ ಕೊರೊನಾ ಚೈನ್ ಲಿಂಕ್ ತುಂಡಾಗಿ ಸೋಂಕಿತರ ಸಂಖ್ಯೆ ಸಂಪೂರ್ಣ ಇಳಿಮುಖವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಇಂದಿನ ಟಾಸ್ಕ್ ಫೋರ್ಸ್ ಸಮಿತಿ ವರದಿ ಹಾಗೂ ಮುಖ್ಯಮಂತ್ರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಓದಿ: ಹೆಡ್ ಕಾನ್ಸ್ಟೇಬಲ್ ಸಾವು: ಬ್ಲಾಕ್ ಫಂಗಸ್ನಿಂದ ಮೃತಪಟ್ಟಿರುವ ಶಂಕೆ