ಬೆಂಗಳೂರು: ಮನವಿಗೆ ಸ್ಪಂದಿಸದಿದ್ದರೆ ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಅವರಿಗೆ ಎಚ್ಚರಿಕೆ ನೀಡಿದ್ದು, ಗದ್ದಲಕ್ಕೆ ಕಾರಣವಾಯಿತು. ಇಂದು ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್, ರಾಜ್ಯದಲ್ಲಿ ಇತ್ತೀಚೆಗೆ ದ್ವೇಷ ಭಾಷಣ ಕುರಿತಂತೆ ಸಚಿವರು ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಾವು ನೀಡಿದ್ದ ಹೇಳಿಕೆ ಸಮರ್ಥಿಸಿಕೊಂಡು, ಯಾರನ್ನೂ ವೈಯಕ್ತಿಕವಾಗಿ ಅಗೌರವಿಸುವ ಹಾಗೂ ಟೀಕಿಸುವ ಉದ್ದೇಶ ನನ್ನದಲ್ಲ. ಕೇವಲ ರಾಜಕೀಯ ಭಾಷಣ ಮಾಡಿದ್ದೇನೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖಾದರ್, ಕೃಷ್ಣಬೈರೇಗೌಡ, ತನ್ವೀರ್ ಸೇಠ್, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಹಾಗು ಮತ್ತಿತರರು ಮಾತನಾಡಿ, ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅವರ ಉತ್ತರ ಹಾರಿಕೆಯಾಗಿದೆ. ಆರೋಪಿ ಸ್ಥಾನದಲ್ಲಿ ಇರುವವರಿಂದ ಇನ್ನೇನು ಉತ್ತರ ನಿರೀಕ್ಷಿಸಲು ಸಾಧ್ಯ? ಎಂದು ಮುಗಿಬಿದ್ದರು. ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಇದರ ನಡುವೆಯೇ ಅಶ್ವತ್ಥನಾರಾಯಣ ಉತ್ತರಿಸುತ್ತಿದ್ದಾಗ ಈಶ್ವರ ಖಂಡ್ರೆ ಏರಿದ ಧ್ವನಿಯಲ್ಲಿ ಮಾತಾಡಿದ್ದು, ಸ್ಪೀಕರ್ ಅವರನ್ನು ಕೆರಳಿಸಿತು.
ಸ್ಪೀಕರ್ ಎಚ್ಚರಿಕೆ: ಪದೇ ಪದೇ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದರೂ ಖಂಡ್ರೆ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಇದರಿಂದ ಸಹನೆ ಕಳೆದುಕೊಂಡ ಕಾಗೇರಿ, ನೀವು ಹಿರಿಯರು. ಈ ರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ. ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಸಭಾಧ್ಯಕ್ಷರು ಹೇಳಿದ ಮೇಲೂ ನೀವು ಪೀಠಕ್ಕೆ ಗೌರವ ಕೊಡದೆ ಮಾತನಾಡುತ್ತಿದ್ದೀರಿ. ಇದೇನಾ ನೀವು ಸಭಾಧ್ಯಕ್ಷರಿಗೆ ಕೊಡುವ ಗೌರವ ಎಂದು ಪ್ರಶ್ನಿಸಿದರು.
ನಾನು ಇದುವರೆಗೆ ಸಹನೆ ಕಳೆದುಕೊಳ್ಳದೇ ಮಾತನಾಡಿದ್ದೇನೆ. ಪೂರ್ಣ ಅಧಿಕಾರ ಚಲಾಯಿಸುವ ಅವಕಾಶ ಮಾಡಿಕೊಡಬೇಡಿ. ನನ್ನನ್ನು ಅನಗತ್ಯವಾಗಿ ಎಳೆದು ಮಾತನಾಡಿಸುತ್ತೀರಿ. ಕೇಳುವ ಸೌಜನ್ಯವಿಲ್ಲವೇ?, ಇದೇ ರೀತಿ ಮುಂದುವರಿದರೆ, ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಸ್ಪೀಕರ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಪ್ರಿಯಾಂಕ್ ಖರ್ಗೆ ಅವರು, ಇದೇನು ಸರ್ವಾಧಿಕಾರವೇ? ನಾವು ಈ ಸದನದ ಸದಸ್ಯರು. ಮಾತನಾಡುವ ಹಕ್ಕು ನಮಗೂ ಇದೆ. ಈ ರೀತಿ ಸೂಚಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಆಗ ಸ್ಪೀಕರ್, ನಿಮಗೆ ಮಾತ್ರ ಬಿಪಿ ಬರುವುದಿಲ್ಲ. ನನಗೂ ಕೂಡ ಬಿಪಿ ಬರುತ್ತದೆ. ನಿಮಗೆ ಕೊನೇ ಬಾರಿ ಎಚ್ಚರಿಕೆ ಕೊಡುತ್ತಿದ್ದೇನೆ. ಹೊರ ಹಾಕಬೇಕೇ ಎಂದು ಕೇಳಿ, ನಿಮ್ಮಂಥವರು ಆಯ್ಕೆಯಾಗಿ ಬರುವುದು ಈ ಸದನಕ್ಕೆ ಅವಮಾನ ಎಂದು ಹೇಳುತ್ತಿದ್ದಂತೆ ಸದನದಲ್ಲಿ ಮತ್ತಷ್ಟು ಗಲಾಟೆ ನಿರ್ಮಾಣವಾಯಿತು.
ಸಭಾಧ್ಯಕ್ಷರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಈಶ್ವರ್ ಖಂಡ್ರೆ ಹಾಗೂ ಇತರ ಕಾಂಗ್ರೆಸ್ ಸದಸ್ಯರು, ಬಾಲ್ಕಿ ಜನರಿಗೆ ಮಾಡಿದ ಅವಮಾನವಿದು ಎಂದು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಸದನ ಸಹಜ ಸ್ಥಿತಿಗೆ ಬಾರದ ಕಾರಣ ಸಭಾಧ್ಯಕ್ಷರು ಕಾರ್ಯಕಲಾಪವನ್ನು 15 ನಿಮಿಷ ಮುಂದೂಡಿದರು.
ಸಂಧಾನ ಸಭೆಯ ಬಳಿಕ ಕಲಾಪ ಆರಂಭವಾದಾಗ ಸ್ಪೀಕರ್ ಕಾಗೇರಿ ಮಾತನಾಡಿ, ಈಶ್ವರ್ ಖಂಡ್ರೆ ಹಾಗೂ ಇತರರು ತಮ್ಮ ಸ್ಥಾನಕ್ಕೆ ಮರಳುವಂತೆ ಮನವಿ ಮಾಡಿದರು. ನಿಮ್ಮ ಹಾಗೂ ನಿಮ್ಮ ಕ್ಷೇತ್ರದ ಮತದಾರರ ಬಗ್ಗೆ ನನಗೆ ಗೌರವ ಇದೆ. ನಿಮ್ಮ ತಂದೆಯವರ ಜೊತೆ ನನಗೆ ಸಲುಗೆ ಇದೆ. ಅವರ ಶಿಸ್ತಿನ ಜೀವನದಿಂದ ಪ್ರೇರಣೆ ಪಡೆದುಕೊಂಡಿದ್ದೆ. ವೈಯಕ್ತಿಕ ಸಂಬಂಧದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅನ್ಯತಾ ಭಾವಿಸಬೇಡಿ, ಇಲ್ಲಿಗೆ ಮುಗಿಸೋಣ. ಸದನ ಮುಂದುವರೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಸ್ಪೀಕರ್ ಮನವಿ ಬಳಿಕವೂ ಸದನದ ಬಾವಿಯಲ್ಲೇ ಈಶ್ವರ್ ಖಂಡ್ರೆ ನಿಂತರು. ಸದನದಲ್ಲಿ ನಾನು ಉದ್ವೇಗದಿಂದ ಮಾತನಾಡಿದೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ದಯಮಾಡಿ ನಿಮ್ಮ ಸ್ಥಾನಕ್ಕೆ ಬನ್ನಿ ಅಂತ ಸ್ಪೀಕರ್ ಮನವಿ ಮಾಡಿದರು. ಆಕ್ಷೇಪಾರ್ಹ ಪದಗಳನ್ನು ಕಡತದಿಂದ ತೆಗೆದುಹಾಕೋಣ ಎಂದು ಹೇಳಿದರು.
ಸರ್ಕಾರದ ಪರವಾಗಿಯೂ ಮನವಿ ಮಾಡುತ್ತೇವೆ. ತಮ್ಮ ಸ್ಥಾನಕ್ಕೆ ಮರಳುವಂತೆ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು. ಸ್ಪೀಕರ್ ಮನವಿಯಂತೆ ಕಾಂಗ್ರೆಸ್ ಸದಸ್ಯರು ಧರಣಿ ವಾಪಸ್ ತೆಗೆದುಕೊಂಡರು. ಈ ವೇಳೆ ಈಶ್ವರ್ ಖಂಡ್ರೆ ಮಾತನಾಡಿ, ನಾನು ಗಡಿ ಭಾಗ ಬೀದರ್ನಿಂದ ಬಂದಿದ್ದೇನೆ. ಸ್ವಲ್ಪ ಧ್ವನಿ ಗಟ್ಟಿ ಇದೆ. ಮಾತನಾಡುವಾಗ ಗಟ್ಟಿಯಾಗಿ ಬರುತ್ತದೆ. ನನ್ನನ್ನು ಮೂರು ಲಕ್ಷ ಜನ ಆಯ್ಕೆ ಮಾಡಿದ್ದಾರೆ. ಸದನ ನಮ್ಮ ಅಭಿಪ್ರಾಯ ತಿಳಿಸುವ ವೇದಿಕೆ. ನನಗೆ ನಿಮ್ಮ ಬಗ್ಗೆ, ಪೀಠದ ಬಗ್ಗೆ ಗೌರವ ಇದೆ. ನಾನು ಯಾವುದೇ ಉದ್ದೇಶ ಇಟ್ಟುಕೊಂಡು ಮಾತನಾಡಿಲ್ಲ. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.