ಬೆಂಗಳೂರು : ರಾಜ್ಯ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣಕ್ಕೆ ಭಾರೀ ಗೆಲುವು ಸಿಕ್ಕಿದೆ.
ರಾಜ್ಯ ಕುರುಬರ ಸಂಘದ ಅಧ್ಯಕ್ಷರಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಬೆಂಬಲಿಗ, ಹಿರಿಯ ಮುಖಂಡ ಜಿ. ಕೃಷ್ಣ ಆಯ್ಕೆಯಾಗಿದ್ದಾರೆ. ಬಿಬಿಎಂಪಿ ಮಾಜಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಅವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಸುಬ್ರಮಣ್ಯ ಮತ್ತು ಖಜಾಂಚಿಯಾಗಿ ದೇವರಾಜ್ ಆಯ್ಕೆಯಾಗುವ ಮೂಲಕ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದೆ.
ರಾಜ್ಯ ಕುರುಬರ ಸಂಘದ ಚುಕ್ಕಾಣಿ ಹಿಡಿಯಲು ಸಿದ್ದರಾಮಯ್ಯ ಮತ್ತು ಸಚಿವ ಕೆ ಎಸ್ ಈಶ್ವರಪ್ಪ ಬಣದ ಮಧ್ಯೆ ಹಲವು ಸುತ್ತಿನ ಪ್ರಯತ್ನ ನಡೆದಿತ್ತು. ತೆರೆಮರೆಯಲ್ಲಿ ನಡೆದ ಸಂಧಾನ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆ ಇಂದು ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಣದ ಮುಖಂಡರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ರಾಜಕೀಯ ಬೇಡ ಎಂದು ಸಿದ್ದರಾಮಯ್ಯ ಅವರು ಅವಿರೋಧ ಆಯ್ಕೆಗೆ ಒಲವು ತೋರಿದ್ದರು. ಆದರೆ, ಸಚಿವ ಕೆ ಎಸ್ ಈಶ್ವರಪ್ಪ ಚುನಾವಣೆಗೆ ಪಟ್ಟು ಹಿಡಿದಿದ್ದರು. ಇಂದು ನಡೆದ 34 ಸ್ಥಾನಗಳ ಚುನಾವಣೆಯಲ್ಲಿ ಸಚಿವ ಈಶ್ವರಪ್ಪ ಬಣ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.