ಬೆಂಗಳೂರು: ಕರುನಾಡಿಗೆ ಈಗ 50ರ ಸಂಭ್ರಮ. ಮೈಸೂರು ರಾಜ್ಯ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಅಮೃತ ಭಾರತಿಗೆ 50ರ ಕನ್ನಡದ ಆರತಿಯ ಸಂಭ್ರಮದಲ್ಲಿನ ಕರುನಾಡು ದೇಶದ ಆರ್ಥಿಕ ವಿಕಾಸದ ಎಂಜಿನ್ ಆಗಿ ಹೊರಹೊಮ್ಮಿದೆ.
ಮೈಸೂರು ರಾಜ್ಯ 1973 ಅಕ್ಟೋಬರ್ 20ರಂದು ಕರ್ನಾಟಕ ಎಂದು ಮರು ನಾಮಕರಣಗೊಂಡಿದ್ದು ಈಗ 50 ವರ್ಷ ಪೂರೈಸುತ್ತಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ವರ್ಷವಿಡೀ ಆಯೋಜಿಸಲು ಕರುನಾಡು ಅಣಿಯಾಗಿದೆ. ಪ್ರಗತಿಶೀಲ ರಾಜ್ಯ ಕಾರ್ನಾಟಕ ತನ್ನ 50 ವರ್ಷದ ವಿಕಾಸದ ಹಾದಿಯಲ್ಲಿ ಅನೇಕ ಮೇಲ್ಪಂಕ್ತಿಗಳನ್ನು ಹಾಕಿ ಇಡೀ ಜಗತ್ತೇ ತಿರುಗಿ ನೋಡುವ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕುವ ಕೆಲಸ ಮಾಡಿದೆ. ಐಟಿ ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರು ಎಂಬ ರಾಜಧಾನಿ ಹೊಂದಿರುವ ಕರ್ನಾಟಕ ಮೊದಲಿನಿಂದಲೂ ಪ್ರಗತಿಯ ಹಾದಿಯಲ್ಲಿ ಮುಂದು.
ಕಾಲದಿಂದ ಕಾಲಕ್ಕೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳೇ ಈ ಪ್ರಗತಿಯ ಅಡಿಪಾಯ. ಹಾಗಾಗಿ ಇವತ್ತು ದೇಶದ ವಿಕಾಸದ ಎಂಜಿನ್ ಎಂಬ ಹೆಗ್ಗಳಿಕೆಯ ಹೆಗ್ಗುರುತನ್ನು ಕರ್ನಾಟಕ ಮೂಡಿಸಿದೆ. ರಾಜ್ಯದ ಬಜೆಟ್‌ನ ಇತಿಹಾಸವನ್ನು ಅವಲೋಕಿಸಿದರೆ ಅಭಿವೃದ್ಧಿಯ ಪಥ ಹೇಗೆ ಸಾಗಿ ಬಂದಿದೆ ಎಂಬುದರ ಸ್ಥೂಲ ಚಿತ್ರಣ ದೊರಕುತ್ತದೆ. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು 1952-53 ರಲ್ಲಿ 21 ಕೋಟಿ ರೂಗಳ ಬಜೆಟ್ ಅನ್ನು ಮೊದಲ ಬಾರಿಗೆ ಮಂಡಿಸಿದ್ದರು. ಇಂತಹ ಪ್ರಗತಿಪರ ರಾಜ್ಯದ ಮೊದಲ ಬಜೆಟ್‌ನ ಗಾತ್ರ 21.03 ಕೋಟಿ ರೂ. ಇತ್ತು. ಇದೀಗ ರಾಜ್ಯದ ಬಜೆಟ್‌ನ ಗಾತ್ರ 3 ಲಕ್ಷ ಕೋಟಿ ರೂ. ದಾಟಿದೆ.
ರಾಜ್ಯದ ಆರ್ಥಿಕ ಹೆಜ್ಜೆಗುರುತು: ಕರ್ನಾಟಕ ದೇಶದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಪ್ರಗತಿಶೀಲ ರಾಜ್ಯವಾಗಿದೆ. ಕರುನಾಡಿನ ಆರ್ಥಿಕತೆ 2023-24 ಸಾಲಿನಲ್ಲಿ 7.9%ರ ವೇಗದಲ್ಲಿ ಪ್ರಗತಿ ಸಾಧಿಸುವ ಅಂದಾಜು ಮಾಡಲಾಗಿದೆ. ದೇಶದ 7% ಜಿಡಿಪಿ ದರಕ್ಕೆ ಹೋಲಿಸಿದರೆ ರಾಜ್ಯದ ಜಿಡಿಪಿ ದರ ಅಧಿಕವಾಗಿದೆ.
ಕರ್ನಾಟಕ ದೇಶದ ಮೂರನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಹೆಗ್ಗಳಿಕೆ ಗಳಿಸಿದೆ. 2023-24 ಆರ್ಥಿಕ ವರ್ಷದಲ್ಲಿ ಕರುನಾಡಿನ ಜಿಎಸ್ಡಿಪಿ 23.3 ಲಕ್ಷ ಕೋಟಿ ಇರಲಿದೆ. ಕರ್ನಾಟಕ ಸಿರಿವಂತರ ನಾಡಾಗಿದೆ. ದೇಶದಲ್ಲಿನ, ಅಗ್ರಗಣ್ಯ ಪಂಚ ಸಂಪದ್ಬರಿತ ರಾಜ್ಯಗಳ ಪೈಕಿ ಒಂದಾಗಿದೆ. ಕರ್ನಾಟಕದ ಜನರು ಸರಾಸರಿ 3.32 ಲಕ್ಷ ರೂ. ತಲಾ ಆದಾಯ ಹೊಂದಿರುವ ಮೂಲಕ ದೇಶದಲ್ಲೇ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ.
1960-61ರಲ್ಲಿ ನಿವ್ವಳ ರಾಜ್ಯ ದೇಶೀಯ ಉತ್ಪಾದನೆ 692 ಕೋಟಿ ರೂ. ಇತ್ತು. ಅದೇ ರೀತಿ ರಾಜ್ಯದ ತಲಾ ಆದಾಯ 296 ರೂ. ಇತ್ತು. 1970-71ರಲ್ಲಿ ರಾಜ್ಯದ ನಿವ್ವಳ ದೇಶಿಯ ಉತ್ಪಾದನೆ (ಎನ್ಎಸ್ಜಿ) 1,858 ಕೋಟಿ ರೂ.ಗೆ ಏರಿಕಡಯಾಗಿತ್ತು. ಆಗಿನ ತಲಾ ಆದಾಯ 641 ರೂ. ಇತ್ತು. 1980-81ರಲ್ಲಿ ರಾಜ್ಯ ನಿವ್ವಳ ದೇಶೀಯ ಉತ್ಪಾದನೆ 5,587 ಕೋಟಿ ರೂ. ಏರಿಕೆಯಾಗಿತ್ತು. ಆ ಕಾಲದಲ್ಲಿ ರಾಜ್ಯದ ತಲಾ ಆದಾಯ 1,520 ರೂ. ಇದೆ. 1990-91ರಲ್ಲಿ ಕರ್ನಾಟಕದ ನಿವ್ವಳ ದೇಶೀಯ ಉತ್ಪಾದನೆ 20,551 ಕೋಟಿ ರೂ. ಏರಿಕೆಯಾಯಿತು. ಆವತ್ತು ಇದ್ದ ರಾಜ್ಯದ ತಲಾ ಆದಾಯ 4,598 ರೂ. 2000-01ರಲ್ಲಿ ರಾಜ್ಯ ನಿವ್ವಳ ದೇಶೀಯ ಉತ್ಪಾದನೆ 96,348 ಕೋಟಿ ರೂ. ಇತ್ತು. ಅದೇ ತಲಾ ಆದಾಯ 18,344 ರೂ. ಇತ್ತು. ಪ್ರಗತಿಯತ್ತ ದಾಪುಗಾಲು ಇಡುತ್ತಿರುವ ರಾಜ್ಯದ ಜಿಡಿಪಿ ಅಂದಾಜು 23.3 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇತ್ತ ತಲಾ ಆದಾಯ 3.32 ಲಕ್ಷ ರೂ.ಗೆ ಏರಿಕೆಯಾಗಿದೆ.
ದೇಶದ ಆರ್ಥಿಕತೆಗೆ ರಾಜ್ಯದ ಕೊಡುಗೆ ಏನು?: ದೇಶದ ಆರ್ಥಿಕತೆಗೆ ರಾಜ್ಯದ ಕೊಡುಗೆ ಅಪಾರವಾಗಿದೆ. ದೇಶದ ಅಭಿವೃದ್ಧಿಗೆ ಕರುನಾಡು ಆರ್ಥಿಕ ಪವರ್ ಹೌಸ್ ಆಗಿ ಹೊರಹೊಮ್ಮಿದೆ. ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಕೊಡುಗೆಯ ಗುರಿ ಹೊಂದಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಭಾರತದ ಮುಂಚೂಣಿಯಲ್ಲಿರುವ ಐದು ರಾಜ್ಯಗಳಲ್ಲಿ ಒಂದಾದ ಕರ್ನಾಟಕ ಪ್ರಗತಿಯ ಹಾದಿಯಲ್ಲಿ ಭದ್ರ ಬುನಾದಿ ಹಾಕುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳು 2030ನ್ನು ನೋಡಿದಾಗ, ಕರ್ನಾಟಕ ಒಟ್ಟಾರೆ ಸಾಧನೆಯಲ್ಲಿ ಮೂರನೇ ಸ್ಥಾನದಲ್ಲಿದೆ.
ಕರ್ನಾಟಕ ಐಟಿಬಿಟಿ ಕ್ಷೇತ್ರದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 80ರ ದಶಕದಲ್ಲಿ ಮೊದಲ ಸಾಫ್ಟ್ ವೇರ್ ಕಂಪನಿ ಕರ್ನಾಟಕದಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ರಾಜ್ಯದಲ್ಲಿ ಐಟಿಬಿಟಿ ಸೇವೆ ರಫ್ತಿನಲ್ಲಿ ಕರುನಾಡು ಮುಂಚೂಣಿಯಲ್ಲಿದೆ. ಐಟಿ ಮತ್ತಿತರ ತಂತ್ರಜ್ಞಾನಾಧಾರಿತ ಕಂಪನಿಗಳನ್ನು ಹೊಂದಿರುವ ರಾಜ್ಯದ ಸೇವಾ ವಲಯ ಒಟ್ಟು ಅರ್ಥ ವ್ಯವಸ್ಥೆಯ ಶೇ. 65.1ರಷ್ಟು ಕೊಡುಗೆಯನ್ನು ನೀಡುತ್ತಿದೆ. ಇದು ಮುಂಚೂಣಿಯಲ್ಲಿರುವ ಐದು ರಾಜ್ಯಗಳಲ್ಲಿ ಅತ್ಯಂತ ಗರಿಷ್ಠ ಪ್ರಮಾಣದಾಗಿರುತ್ತದೆ. ಕರ್ನಾಟಕ ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಪ್ರಮುಖ ರಾಜ್ಯವಾಗಿದೆ. ಇಪಿಎಫ್‌ಒ ಅಂಕಿಅಂಶದ ಪ್ರಕಾರ, ದೇಶದ ಒಟ್ಟು ಸಂಘಟಿತ ಉದ್ಯೋಗಗಳ ಪೈಕಿ ಶೇಕಡ 10ರಷ್ಟು ಉದ್ಯೋಗಗಳನ್ನು ಕರ್ನಾಟಕ ಸೃಜಿಸಿರುತ್ತದೆ.
ಕರ್ನಾಟಕ ಸುಮಸರು 5,500 ಐಟಿ ಕಂಪನಿಗಳಿಗೆ ಆಶ್ರಯ ತಾಣವಾಗಿದೆ. ಸುಮಾರು 750 ಬಹುರಾಷ್ಟ್ರೀಯ ಕಂಪನಿಗಳಿವೆ. ಆ ಮೂಲಕ ಅಂದಾಜು 58 ಬಿಲಿಯನ್ ಡಾಲರ್ ರಫ್ತು ಮಾಡುತ್ತಿದೆ. ರಾಜ್ಯ ದೇಶದಲ್ಲೇ ಅತಿ ಹೆಚ್ಚು ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಬಳಿಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ ಸುಮಾರು 24% ಎಫ್ಡಿಐಯನ್ನು ಆಕರ್ಷಿಸಿದೆ. ಅತಿ ಹೆಚ್ಚು ಜಿಎಸ್ಟಿ ಸಂಗ್ರಹ ಕಂಡ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಸೆಪ್ಟೆಂಬರ್ ಅಂತ್ಯಕ್ಕೆ 11,693 ಕೋಟಿ ರೂ. ಜಿಎಸ್ಟಿ ಸಂಗ್ರಹ ಮಾಡಿದೆ. ಅತಿ ಹೆಚ್ಚು ಜಿಎಸ್ ಟಿ ಸಂಗ್ರಹದಲ್ಲಿ ದೇಶದಲ್ಲಿ ಮಹಾರಾಷ್ಟ್ರ ಬಿಟ್ಟು ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಕರ್ನಾಟಕ ಸ್ಟಾರ್ಟಪ್ ಕ್ಷೇತ್ರ ವಿಶ್ವದಲ್ಲೇ ಮೂರನೇ ಅತಿದೊಡ್ಡ ಇಕೋ ಸಿಸ್ಟಮ್ ಹೊಂದಿದೆ. ಸುಮಾರು 10,000 ಡಿಪಿಐಐಟಿ ಇಲಾಖೆ ಮಾನ್ಯತೆ ಪಡೆದ ಸ್ಟಾರ್ಟ್ ಅಪ್ಗಳು ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿವೆ. ರಾಜ್ಯ ಸುಮಾರು 40% ಭಾರತದಲ್ಲಿನ ಒಟ್ಟು ಯುನಿಕಾರ್ನ್ ಕಂಪನಿಗಳಿಗೆ ಆಶ್ರಯ ತಾಣವಾಗಿದೆ. 40 ಯುನಿಕಾರ್ನ್ಸ್ ಮತ್ತು 44 ಸೂನಿಕಾರ್ನ್ಸ್ ಗಳನ್ನು ಹೊಂದಿವೆ.
ಕಳೆದ 30 ವರ್ಷದಲ್ಲಿ ಕರ್ನಾಟಕ ಸುಸ್ಥಿರ ಅಭಿವೃದ್ಧಿ ಕಾಣುತ್ತಿದೆ. ಕರ್ನಾಟಕ ಸೇವಾ ವಲಯದಲ್ಲಿ ಶರವೇಗದ ಅಭಿವೃದ್ಧಿ ಕಾಣುತ್ತಿದೆ. ಉತ್ಪಾದನಾ ವಲಯದಲ್ಲಿ ರಾಜ್ಯ ಸ್ವಲ್ಪ ಹಿಂದೆ ಉಳಿದುಕೊಂಡಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಸುಮಾರು 8-9% ಇದೆ. ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಆರ್ಥಿಕ ತಜ್ಞ ಡಿ.ಮುರಳೀಧರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಹೆಸರು ಹೇಗೆ ಬಂತು, ಸೂಚಿಸಿದ್ದು ಯಾರು? ಇದಕ್ಕಿದೆ ಸುದೀರ್ಘ ಇತಿಹಾಸ