ಬೆಂಗಳೂರು: ಉತ್ತರ ಪ್ರದೇಶ ಹಾಗು ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ 2020 ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಇಂದಿನಿಂದಲೇ ಕಾನೂನು ಜಾರಿಗೆ ಬಂದಿದೆ.
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿಂದ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ 2020 ಜಾರಿಯಾಗಿದ್ದು, ಕರ್ನಾಟಕ ರಾಜ್ಯಪತ್ರದಲ್ಲಿ ಸುಗ್ರೀವಾಜ್ಞೆಯನ್ನು ಪ್ರಕಟಿಸಲಾಗಿದೆ. ಲಾಕ್ಡೌನ್ ನಿಯಮ ಮುರಿದರೆ, ಆರೋಗ್ಯ ಸಂಬಂಧಿ ಸೇವೆಯಲ್ಲಿರುವ ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಯಾರಾದರೂ ಈ ನಿಯಮ ಉಲ್ಲಂಘಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ 3 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ.
ಹಲ್ಲೆ ಮಾಡುವವರಿಗೆ ಪ್ರೇರೇಪಣೆ ಕೊಡುವವರಿಗೂ ಶಿಕ್ಷೆ ವಿಧಿಸಲಿದ್ದು,10 ಸಾವಿರ ದಂಡ, ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಲಾಕ್ ಡೌನ್, ಸೀಲ್ ಡೌನ್, ಕಂಟೇನ್ಮೆಂಟ್ ಝೋನ್ನಲ್ಲಿಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ, ಅಂತಹವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನಷ್ಟವಾದ ಆಸ್ತಿಯ ದುಪ್ಪಟ್ಟು ಮೌಲ್ಯದ ದಂಡ ವಿಧಿಸಲಿದ್ದು, ದಂಡದ ಹಣ ಪಾವತಿ ಮಾಡದೇ ಇದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆಸ್ತಿ ಇಲ್ಲದಿದ್ದರೆ ಬಂಧನಕ್ಕೆ ಒಳಪಡಿಸಲಾಗುತ್ತದೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಹೋಮ್ ಗಾರ್ಡ್ಸ್ ಸೇರಿದಂತೆ ಕೊರೊನಾ ವಾರಿಯರ್ಸ್ ಆಗಿರುವ ಯಾರ ಮೇಲೂ ಹಲ್ಲೆ ಮಾಡಿದ್ರೂ ಜೈಲು ಶಿಕ್ಷೆ ಗ್ಯಾರಂಟಿಯಾಗಿದೆ.
ಯಾವುದಾದರೂ ಕಂಪನಿ ತಪ್ಪೆಸಗಿದ್ರೆ ಆ ಕಂಪನಿಯನ್ನು ಅಪರಾಧದ ದೋಷಿಯೆಂದು ಪರಿಗಣನೆ ಮಾಡಲಾಗುತ್ತದೆ. ಕಂಪನಿಯ ಪ್ರತಿಯೊಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನು ದೋಷಿಯೆಂದು ಪರಿಗಣಿಸಲಾಗುತ್ತದೆ. ಇಂದು ಬೆಳಗ್ಗೆ ಸುಗ್ರೀವಾಜ್ಞೆ ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದ್ದು, ಸಂಜೆಯ ವೇಳೆಗೆ ರಾಜ್ಯಪಾಲ ವಜುಭಾಯ್ ವಾಲಾ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.