ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನಾಳೆ ಮಧ್ಯಾಹ್ನ 2.30ಕ್ಕೆ ಮಂದೂಡಿದೆ.
ಈ ಕುರಿತಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿನಿ ರೇಷಮ್ ಹಾಗೂ ಇತರೆ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿರುವ ಪ್ರತ್ಯೇಕ 6 ರಿಟ್ ಅರ್ಜಿಗಳು ಹಾಗೂ 18 ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ಎರಡೂವರೆ ತಾಸಿಗೂ ಹೆಚ್ಚು ಕಾಲ ವಾದ ಆಲಿಸಿದ ಪೀಠ, ಕಾಲಾವಕಾಶ ಕೊರತೆ ಹಿನ್ನಲೆಯಲ್ಲಿ ವಿಚಾರಣೆಯನ್ನು ನಾಳೆ (ಫೆ.16) ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಮೂರನೇ ದಿನವೂ ಅರ್ಜಿದಾರ ವಿದ್ಯಾರ್ಥಿನಿಯರ ಪರ ವಕೀಲರಾದ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು. ಸಾರ್ವಜನಿಕ ಸುವ್ಯವಸ್ಥೆಗೆ ಯಾವ ರೀತಿಯಲ್ಲೂ ಸಮಸ್ಯೆಯಾಗದ ಹಿಜಾಬ್ ನಿರ್ಬಂಧಿಸಿರುವು ಕ್ರಮ ಸರಿಯಲ್ಲ ಎಂದರು. ವಿದ್ಯಾರ್ಥಿನಿಯರನ್ನು ಹಿಂದೂ ಮುಸ್ಲಿಂ ಎಂದು ಪ್ರತ್ಯೇಕಿಸುವುದನ್ನು ತಪ್ಪಿಸಬೇಕು. ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗಿಡಬಾರದು. ಸಮವಸ್ತ್ರದೊಂದಿಗೆ ಹೆಚ್ಚುವರಿಯಾಗಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು. ಆದ್ದರಿಂದ ಈ ನಿಟ್ಟಿನಲ್ಲಿ ಹೊರಡಿಸಿರುವ ಮಧ್ಯಂತರ ಆದೇಶವನ್ನು ಹಿಂಪಡೆಯಬೇಕು ಎಂದು ಕೋರಿದರು.
ದೇವದತ್ ವಾದ ಮಂಡನೆ ಪೂರ್ಣಗೊಂಡ ಬಳಿಕ ಅರ್ಜಿದಾರ ವಿದ್ಯಾರ್ಥಿಯರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿದರು. ಸಮವಸ್ತ್ರ ಸಂಹಿತೆಯನ್ನೇ ರೂಪಿಸದೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಗದಿ ಮಾಡಲು ನೀಡಿರುವ ಸೂಚನೆ ಸರಿಯಲ್ಲ ಎಂದು ವಿವರಿಸಿದರು.
ಉರ್ದು ಶಾಲೆಗಳಲ್ಲಿ ಹಿಜಾಬ್ ನಿರ್ಬಂಧ ಆರೋಪ : ಅರ್ಜಿ ವಿಚಾರಣೆ ಆರಂಭದಲ್ಲಿ ವಿದ್ಯಾರ್ಥಿನಿಯರ ಪರ ವಕೀಲ ತಾಹೀರ್ ವಾದ ಮಂಡಿಸಿ ರಾಜ್ಯದ ಉರ್ದು ಶಾಲೆಗಳಲ್ಲೂ ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ. ಮಾಧ್ಯಮಗಳಲ್ಲಿಯೂ ಈ ಕುರಿತು ವರದಿಯಾಗಿದೆ ಎಂದರು.
ಒಬ್ಬಳೇ ವಿದ್ಯಾರ್ಥಿನಿಯಿಂದ ಎರಡು ಅರ್ಜಿ : ವಿಚಾರಣೆ ಮಧ್ಯದಲ್ಲಿ ನ್ಯಾಯಾಲಯದ ಗಮನ ಸೆಳೆದೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಓರ್ವ ವಿದ್ಯಾರ್ಥಿನಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದೇ ವಿಷಯಕ್ಕೆ ಸಂಬಂಧಿಸದಂತೆ ಎರಡು ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ. ಹಾಗೆಯೇ, ನ್ಯಾಯಾಲಯದ ಅಮೂಲ್ಯ ಸಮಯವೂ ವ್ಯರ್ಥವಾಗಲಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ರೇಷಮ್ ಪರ ವಕೀಲ ಎರಡನೇ ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದರು.