ಬೆಂಗಳೂರು: ರಾಜ್ಯದ ಕೆಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ವಸ್ತ್ರಸಂಹಿತೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ಈ ಕುರಿತಂತೆ ಸಲ್ಲಿಸಿರುವ 8 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.
ಹಿಜಾಬ್ ನಿರ್ಬಂಧಿಸಿರುವ ಶಿಕ್ಷಣ ಸಂಸ್ಥೆಗಳ ಕ್ರಮ ಸಂವಿಧಾನಬಾಹಿರ. ಶಿಕ್ಷಣ ಸಂಸ್ಥೆಗಳಲ್ಲಿನ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸಮವಸ್ತ್ರ ಸಂಹಿತೆ ನಿಗದಿಪಡಿಸುವ ಅಧಿಕಾರವಿಲ್ಲ. ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆ.
ಇಂತಹ ಆಚರಣೆಯನ್ನು ನಿರ್ಬಂಧಿಸಿರುವ ಕ್ರಮ ಸಂವಿಧಾನದ ವಿಧಿ 25(1)ರ ಅಡಿ ಲಭ್ಯವಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆ ಹಾಗೂ ವಿಧಿ 19ರ ಅಡಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಯುವಕನ ಕೊಲೆ: ಇಬ್ಬರ ಬಂಧನ.. ಮೃತದೇಹ ಮೆರವಣಿಗೆ ವೇಳೆ ಬೆಂಕಿ ಹಚ್ಚಿ, ಕಲ್ಲು ತೂರಾಟ
ಇದಕ್ಕೆ ಪ್ರತಿವಾದ ಮಂಡಿಸಿರುವ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್, ಕಳೆದ ಶುಕ್ರವಾರ ಸರ್ಕಾರದ ಆದೇಶ ಹಾಗೂ ಸಿಡಿಸಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂಬ ವಿಷಯದಲ್ಲಿ ಸರ್ಕಾರದ ಕ್ರಮವನ್ನು ಇಂದು ಎಜಿ ಸಮರ್ಥಿಸಿಕೊಳ್ಳಲು ವಾದ ಮಂಡಿಸಲಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲರು ಕೂಡ ವಾದ ಮಂಡಿಸುವ ನಿರೀಕ್ಷೆ ಇದೆ.