ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸಲ್ಲಿಸಿರುವ ಅರ್ಜಿಗಳನ್ನು 5ನೇ ದಿನವೂ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಇಂದೂ ಕೂಡ ಅರ್ಜಿದಾರರ ಪರ ವಕೀಲರೇ ವಾದ ಮಂಡಿಸಿದರು. ಕೆಲ ಹೊತ್ತು ವಿಚಾರಣೆ ಬಳಿಕ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಯಿತು.
ಈ ಕುರಿತಂತೆ ಸಲ್ಲಿಕೆಯಾಗಿರುವ 8 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರಿಫ್ ಜಮೀಲ್ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅಂತಾರಾಷ್ಟ್ರೀಯ ಒಡಂಬಡಿಕೆಗಳ ಕುರಿತು ಉಲ್ಲೇಖಿಸಲು ಆರಂಭಿಸಿದರು. ಈ ವೇಳೆ, ಅರ್ಜಿದಾರರ ಖಾಸಗಿ ಹಿತಾಸಕ್ತಿ ಇಲ್ಲವೆಂಬುದನ್ನು ಪ್ರಸ್ತುತಪಡಿಸಲು ಪೀಠ ಸೂಚಿಸಿತು.
ಇದನ್ನೂ ಓದಿ: ಬೆಂಗಳೂರಲ್ಲಿ ತಂದೆಯ ತಿಥಿ ದಿನವೇ ಮಗಳ ದುರಂತ ಅಂತ್ಯ: ಮೃತನ ಪತ್ನಿ, ಮಗ ಸೇರಿ ಐವರ ಸ್ಥಿತಿ ಗಂಭೀರ
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಕೊತ್ವಾಲ್, ಅರ್ಜಿದಾರರು ಕೋವಿಡ್ ಸಂದರ್ಭವೂ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಇದೆ. ಆದ್ದರಿಂದ ತಮ್ಮ ವಾದ ಆಲಿಸಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸದ ಪೀಠ, ಪಿಐಎಲ್ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಅದನ್ನು ನಿಯಾಮಾನುಸಾರ ಸಲ್ಲಿಸಿಲ್ಲ ಎಂದು ತಿಳಿಸಿ, ವಜಾಗೊಳಿಸಿತು.
ಇದಕ್ಕೆ ಅರ್ಜಿದಾರರ ಪರ ವಕೀಲರೂ ಆಕ್ಷೇಪಿಸಿದರು. ಇದೇ ಮೊದಲ ಬಾರಿಗೆ ಅರ್ಜಿಯಲ್ಲಿ ಲೋಪ ಎತ್ತಿ ವಜಾಗೊಳಿಸಲಾಗುತ್ತಿದೆ. ಧನ್ಯವಾದಗಳು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನಿಯಮಾನುಸಾರ ಅರ್ಜಿ ಇಲ್ಲದಿದ್ದಾಗ ವಿಚಾರಣೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಮತ್ತೊಂದು ರಿಟ್ ಅರ್ಜಿಯೂ ವಜಾ: ಇದೇ ವೇಳೆ ಅರ್ಜಿದಾರರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದ ಸಲ್ಲಿಸಿದ ಮತ್ತೊಂದು ರಿಟ್ ಅರ್ಜಿಯನ್ನು ಕೂಡ ಪೀಠ ವಜಾಗೊಳಿಸಿತು. ಅರ್ಜಿಯಲ್ಲಿ ಯಾವ ವಿದ್ಯಾರ್ಥಿನಿಗೆ ಸಮಸ್ಯೆಯಾಗಿದೆ. ಅವರು ಯಾವ ಕಾಲೇಜಿಗೆ ಹೋಗುತ್ತಿದ್ದಾರೆ. ಎಲ್ಲಿ ಅವರನ್ನು ತಡೆಯಲಾಗಿದೆ ಎಂಬ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಹೀಗಾಗಿ ಅರ್ಜಿದಾರರು ಸೂಕ್ತ ರೀತಿಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸ್ವತಂತ್ರರು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಲಾಗಿದೆ. ಇದೇ ವೇಳೆ ಕೆಲಹೊತ್ತು ಕಲಾಪ ನಡೆಸಿದ ಪೀಠ ವಿಚಾರಣೆಯನ್ನು ನಾಳೆಗೆ ಮುಂದೂಡಿತು.