ಬೆಂಗಳೂರು: ಖಾಸಗಿ ವಲಯದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕ್ ಸಂವಿಧಾನದ ಪರಿಚ್ಛೇದ 12ನೇ ವಿಧಿ ಪ್ರಕಾರ ಸರ್ಕಾರದ ಅಧೀನದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಯಾವುದೇ ರೀತಿಯಲ್ಲಿಯೂ ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ಬ್ಯಾಂಕ್ನಲ್ಲಿ ಇಟ್ಟಿದ್ದ 1,34,37,826 ಸ್ಥಿರ ಠೇವಣಿ ಪಡೆಯಲು ನಿರ್ದೇಶನ ನೀಡುವಂತೆ ಕೋರಿ ರಾಜೇಶ್ ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಹಣಕಾಸು ವ್ಯವಹಾರ ನಡೆಸುವುದಕ್ಕಾಗಿ ಕರ್ನಾಟಕ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ನ ನಿಯಂತ್ರಣದಲ್ಲಿದೆ. ಆದರೆ, ಶಾಸಸನಬದ್ಧವಾಗಿ ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಸಂಸ್ಥೆ ಅಥಾವ ಕಂಪನಿ ಅಲ್ಲ. ಭಾರತದ ಸಂವಿಧಾನದ 12ನೇ ವಿಧಿಯ ಅಡಿಯಲ್ಲಿ ಪರಿಗಣಿಸಿ ಅಧಿಕಾರಿಗಳಿಗೆ ಯಾವುದೇ ನಿರ್ದೇಶನ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣ ಅರ್ಜಿದಾರರು ಮತ್ತು ಬ್ಯಾಂಕ್ ನಡುವಿನ ಸಂಬಂಧಿಸಿದ ಪ್ರಕರಣವಲ್ಲ. ಆದರೆ, ಪ್ರಕರಣದ ಮತ್ತೊಬ್ಬ ಪ್ರತಿವಾದಿಗೆ ಸಂಬಂಧಿಸಿದ್ದಾಗಿದೆ. ವಿಚಾರಣಾ ನ್ಯಾಯಾಲಯದಿಂದ ಸ್ಪಷ್ಟನೆ ಪಡೆಯಲು ಸ್ಥಿರ ಠೇವಣಿಗಳನ್ನು ಒಳಗೊಂಡಿರುವ ಸಿವಿಲ್ ಮೊಕದ್ದಮೆ ಬಾಕಿಯಿರುವುದಾಗಿ ಅರ್ಜಿದಾರರಿಗೆ ಬ್ಯಾಂಕ್ ಸಲಹೆ ಮಾತ್ರ ನೀಡಿದೆ. ಬ್ಯಾಂಕ್ ಖಾಸಗಿ ವಲಯದ್ದಾಗಿದ್ದು, ವಿಚಾರಣೆಗೆ ಅರ್ಹವಿಲ್ಲ. ಜತೆಗೆ, ಖಾಸಗಿ ಬ್ಯಾಂಕ್ ಆಗಿರುವುದರಿಂದ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ವಿವರ: ಟಿ.ಗೀತಾ ಪೂಂಜಾ ಮತ್ತು ಡಾ.ಪಿ.ತಿಮ್ಮಪ್ಪ ಪೂಂಜಾ ಎಂಬವರು ಮಾಡಿರುವ ಉಯಿಲು(ವಿಲ್)ಗಳಿಗೆ ಸುಬ್ಬಯ್ಯ ಶೆಟ್ಟಿ ಎಂಬವರು ಏಕೈಕ ನಿರ್ವಾಹಕರು ಎಂಬುದಾಗಿ ಘೋಷಣೆ ಮಾಡಬೇಕು ಎಂದು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2022ರ ನವೆಂಬರ್ನಲ್ಲಿ ವಿಚಾರಣೆ ನ್ಯಾಯಾಲಯ, ಗೀತಾ ಪೂಂಜಾ ಮತ್ತು ತಿಮ್ಮಪ್ಪ ಪೂಂಜಾ ಅವರ ಖಾತೆಗಳಲ್ಲಿದ್ದ ಹಣ ಹಿಂಪಡೆಯುವುದಕ್ಕೆ ತಾತ್ಕಾಲಿಕ ತಡೆ ನೀಡಿ ಆದೇಶಿಸಿದ್ದರು.
ಜತೆಗೆ, ಪ್ರಸ್ತಾಪಿತ ಮೊತ್ತ ಅರ್ಜಿದಾರರ ಹೆಸರಿನಲ್ಲಿ ಠೇವಣಿ ಇರುವುದರಿಂದ ಅವರನ್ನು 13ನೇ ಪ್ರತಿವಾದಿಯನ್ನಾಗಿ ಸೇರಿಸಲಾಗಿತ್ತು. ಈ ನಡುವೆ ಹಣ ಠೇವಣಿಯಿಟ್ಟಿದ್ದ ರಾಜೇಶ್ ಕುಮಾರ್ ಶೆಟ್ಟಿ ಎಂಬುವರು ತನ್ನ ವೈಯಕ್ತಿಕ ಖಾತೆಗಳಲ್ಲಿರುವ ಹಣ ಬಿಡುಗಡೆ ಮಾಡುವಂತೆ ಕೋರಿ ಬ್ಯಾಂಕ್ಗೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಶೀಲಿಸಿದ್ದ ಬ್ಯಾಂಕ್, ಪ್ರಸ್ತಾಪಿಸಿರುವ ಹಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ. ಈ ನಿಟ್ಟಿನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಹಣ ಬಿಡುಗಡೆಗೆ ಅವಕಾಶವಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿ ರಾಜೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ವೇಳೆ ಬ್ಯಾಂಕ್ ಪರ ವಾದ ಮಂಡಿಸಿದ್ದ ವಕೀಲರು, ಬ್ಯಾಂಕ್ ಯಾವುದೇ ಸಾರ್ವಜನಿಕ ಕರ್ತವ್ಯ ಅಥಾವ ಕಾರ್ಯವನ್ನು ನಿರ್ವಹಣೆ ಮಾಡುತ್ತಿಲ್ಲ. ಆದ್ದರಿಂದ ಬ್ಯಾಂಕ್ ಸಂವಿಧಾನದ 12ನೇ ಪರಿಚ್ಛೇದದ ಅಡಿಯಲ್ಲಿ ಸರ್ಕಾರದ ಸ್ವತ್ತಲ್ಲ. ಆದ್ದರಿಂದ ಹೈಕೋರ್ಟ್ ಯಾವುದೇ ರೀತಿಯ ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ವಾದ ಮಂಡಿಸಿದ್ದರು.
ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಪ್ರಕರಣ: ವಿಸ್ತೃತ ವಾದ ಮಂಡಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್