ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕಾದರೆ ವೇಗವಾಗಿ ಸೋಂಕಿತರ ಪರೀಕ್ಷೆ ನಡೆಸುವುದು ಅನಿರ್ವಾಯ. ಹೀಗಾಗಿಯೇ, ರಾಜ್ಯದ ಪ್ರತಿ ಆಸ್ಪತ್ರೆಯಲ್ಲೂ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ದರ ವಿಧಿಸಿ ಕೋವಿಡ್ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆ ಕೈಗೊಂಡರೆ, ವರದಿಗನುಸಾರವಾಗಿ ಕೋವಿಡ್ ನಿಯಮವನ್ನು ಕಟ್ಟುನಿಟ್ಟು ಮಾಡಲಾಗುತ್ತದೆ. ಈ ಮೂಲಕ ಕೋವಿಡ್ ನಿಯಂತ್ರಣ ಸಾಧ್ಯ ಎನ್ನಲಾಗ್ತಿದೆ.
ಕೋವಿಡ್ ನಿಯಂತ್ರಿಸಲು ವ್ಯಾಕ್ಸಿನೇಷನ್ ಇದ್ದರೂ ಸಹ ಕೋವಿಡ್ ಪರೀಕ್ಷೆ ಹೆಚ್ಚು ಮಾಡಿದ್ದಷ್ಟು ಸೋಂಕು ನಿಯಂತ್ರಿಸಲು ಸಹಾಯವಾಗುತ್ತದೆ. ಕಳೆದ 2-3 ವಾರದಿಂದ ಕೊರೊನಾ ಏರಿಕೆ ಆಗುತ್ತಿರುವ ಬೆನ್ನಲ್ಲೇ ಆರ್ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸಲಾಗಿದೆ.
ಈಗಾಗಲೇ ಸರ್ಕಾರಿ- ಖಾಸಗಿ ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ, ಮೆಟ್ರೋ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಕ್ಯಾಂಪ್ ಹಾಕಿ ಪರೀಕ್ಷೆ ನಡೆಸಲಾಗುತ್ತಿದೆ.
ಕಡಿಮೆ ಸಮಯದಲ್ಲಿ ಅತಿಹೆಚ್ಚು ಜನರ ವರದಿಗಾಗಿ ಪೂಲಿಂಗ್ ಟೆಸ್ಟ್ ಮೊರೆ:
ನಿತ್ಯ ಒಂದು ಲಕ್ಷ ಕೋವಿಡ್ ಟೆಸ್ಟ್ ಮಾಡಲು ಗುರಿ ಹಾಕಿಕೊಂಡಿರುವ ಆರೋಗ್ಯ ಇಲಾಖೆಯು ಸಮಯ ಉಳಿತಾಯದ ಜತೆಗೆ ಹೆಚ್ಚು ಜನರನ್ನು ಪರೀಕ್ಷಿಸಲು ಪೂಲಿಂಗ್ ಟೆಸ್ಟ್ ಮಾಡುವಂತೆ ಆದೇಶಿಸಿದೆ. ಜಿಲ್ಲಾವಾರು ಗುರಿಯನ್ನ 1 ಲಕ್ಷಕ್ಕೆ ಏರಿಸಿದ ಬಳಿಕ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದೆ.
ಏನಿದು ಪೂಲಿಂಗ್ ಟೆಸ್ಟ್?
ಪೂಲಿಂಗ್ ಟೆಸ್ಟ್ (Pooling test) ಅಂದರೆ ಒಂದು ಮನೆಯಲ್ಲಿ ಐವರು ಸದಸ್ಯರು ಇದ್ದರೆ ಅವರೆಲ್ಲರ ಸ್ಯಾಂಪಲ್ಸ್ ಸಂಗ್ರಹಿಸಿ, ಪರೀಕ್ಷೆಯ ವೇಳೆ ಎಲ್ಲಾ ಸ್ಯಾಂಪಲ್ಸ್ ಅನ್ನು ಮಿಶ್ರಣ ಮಾಡಲಾಗುತ್ತದೆ. ಇದರಲ್ಲಿ ನೆಗೆಟಿವ್ ಬಂದರೆ ಆ ಐದು ಜನರ ವರದಿ ನೆಗಟಿವ್ ಎಂದು ನೀಡಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ ಪುನಃ ಪ್ರತ್ಯೇಕವಾಗಿ ಎಲ್ಲರ ಸ್ಯಾಂಪಲ್ ಪಡೆದು ಪರೀಕ್ಷೆ ಮಾಡಲಾಗುತ್ತದೆ.
ಈ ರೀತಿ ಮಾಡುವುದರಿಂದ ಸಮಯ ಉಳಿತಾಯದ ಜತೆಗೆ ಹೆಚ್ಚು ಜನರ ಕೋವಿಡ್ ಪರೀಕ್ಷೆ ಮಾಡಲು ಸಹಾಯವಾಗುತ್ತದೆ. ಆದರೆ, ಎಸ್ಎಆರ್ಐ ಮತ್ತು ಐಎಲ್ಐ ಇರುವ ಪ್ರಕರಣಗಳಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಪ್ರತ್ಯೇಕವಾಗಿ ಮಾಡುವುದು ಕಡ್ಡಾಯವಾಗಿದೆ.
ಕೋವಿಡ್ ಪರೀಕ್ಷೆಗೆ ಸಿಬ್ಬಂದಿ ಕೊರತೆ ಇಲ್ಲ:
ಕೊರೊನಾ ಮೊದಲ ಅಲೆಯಲ್ಲಿ ಉಂಟಾದ ಆರೋಗ್ಯ ಸಿಬ್ಬಂದಿ ಕೊರತೆಯಿಂದ ಪಾಠ ಕಲಿತಿರುವ ಇಲಾಖೆ, ಈಗಾಗಲೇ ಗುತ್ತಿಗೆ-ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿದೆ. ಕಳೆದ ಡಿಸೆಂಬರ್ನಲ್ಲೇ ನೇಮಕಾತಿ ಅವಧಿ ಮುಕ್ತಾಗೊಂಡಿದ್ದನ್ನು ಮತ್ತೆ ಪರಿಷ್ಕರಿಸಲಾಗಿದೆ.
ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಏರಿಕೆ ಆಗುತ್ತಿದ್ದು, ಸಮರ್ಪಕ ವೈದ್ಯಕೀಯ ಸೇವೆಗಳನ್ನು ಒದಗಿಸಲು ತಾತ್ಕಾಲಿಕವಾಗಿ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದೆ. 18 ಜಿಲ್ಲೆಗಳಿಗೆ ತಾತ್ಕಾಲಿಕವಾಗಿ 45 ಹುದ್ದೆಗಳಂತೆ 810 ವೈದ್ಯ/ಸಿಬ್ಬಂದಿಯನ್ನು ಸೆಪ್ಟೆಂಬರ್ 30ರವರೆಗೆ ಅವಧಿಯನ್ನ ವಿಸ್ತರಿಸುವಂತೆ ಆದೇಶ ನೀಡಲಾಗಿದೆ.
ನಿತ್ಯ ಒಂದು ಲಕ್ಷ ಕೋವಿಡ್ ಪರೀಕ್ಷೆ ಗುರಿ:
ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ಸೋಂಕು ನಿಯಂತ್ರಿಸಲು ಆರ್ ಟಿ-ಪಿಸಿಆರ್ ನಡೆಸಲು ನಿಗದಿತ ಗುರಿ ನೀಡಲಾಗಿದೆ. ಈವರಗೆ ಱಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು 42,20,635 ಜನರಿಗೆ, ಆರ್ಟಿ -ಪಿಸಿಆರ್ ಟೆಸ್ಟ್ ಅನ್ನು 1,77,66,796 ಜನರಿಗೆ ಸೇರಿ ಇಲ್ಲಿ ತನಕ 2,19,87,431 ಕೋವಿಡ್ ಟೆಸ್ಟ್ ಮಾಡಲಾಗಿದೆ.
ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದರೆ ಮೊಬೈಲ್ಗೆ ಮಸೇಜ್ ಬರಲಿದೆ. ತೀರಾ ಅನಾರೋಗ್ಯ ಸಮಸ್ಯೆ ಇರುವವರಿಗೆ ತುರ್ತು ಶಸ್ತ್ರ ಚಿಕಿತ್ಸೆ ಇದ್ದರೆ ಱಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತದೆ. ಇಲ್ಲವಾದರೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ.
ಸಿಬ್ಬಂದಿ ನೇಮಕಕ್ಕೆ ವಲಯ ಜಂಟಿ ಆಯುಕ್ತರಿಗೆ ಅಧಿಕಾರ:
ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಕೋವಿಡ್ ಹಾಗೂ ನಾನ್ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇತ್ತ ಚಿಕಿತ್ಸಾ ವಿಭಾಗದಲ್ಲಿ ಸಿಬ್ಬಂದಿ ನಿರತವಾಗಿದ್ದಾರೆ. ಹೀಗಾಗಿ, ಕೋವಿಡ್ ಪರೀಕ್ಷೆಗೆ ಸಿಬ್ಬಂದಿ ಕೊರತೆ ಉಂಟಾಗುವ ಸಾಧ್ಯತೆ ಆಗಲಿದೆ. ಹೀಗಾಗಿ ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ಅಗತ್ಯವಾದಷ್ಟು ಸಿಬ್ಬಂದಿ ನೇಮಕ ಮಾಡಿಕೊಳ್ಳಬಹುದು. ಇದಕ್ಕಾಗಿ ಎಲ್ಲಾ ವಲಯ ಜಂಟಿ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಸದ್ಯ ನಗರದಲ್ಲಿ ಯಾವುದೇ ಕೊರತೆ ಇಲ್ಲ ಅಂತ ತಿಳಿಸಿದರು.