ಬೆಂಗಳೂರು : ಕರ್ನಾಟಕ ಅತಿ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಯುವ ಮತದಾರರು, ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಂಗಳವಾರ ಅವಲಹಳ್ಳಿಯ ಈಸ್ಟ್ ಪಾಯಿಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಇತ್ತೀಚೆಗೆ, ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಆ ಮೂಲಕ ಕರ್ನಾಟಕ ಇಡೀ ದೇಶದಲ್ಲಿ ಅತೀ ಹೆಚ್ಚು ಏರ್ಪೋರ್ಟ್‌ಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ" ಎಂದು ಹೇಳಿದರು. "ದೇಶದಲ್ಲಿ ಕಳೆದ 9 ವರ್ಷಗಳ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ 74 ಏರ್ಪೋರ್ಟ್‌ಗಳನ್ನು ಕಾರ್ಯಾರಂಭಗೊಳಿಸಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ" ನೀಡಿದರು.
"ಕರ್ನಾಟಕದಲ್ಲೀಗ 10 ಏರ್ಪೋರ್ಟ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. 2014ರ ಮೊದಲು ಬೆಂಗಳೂರು ನಗರದ ಮೆಟ್ರೋ ಸಂಪರ್ಕ ಕೇವಲ 7 ಕಿ.ಮೀ ಮಾತ್ರ ಇತ್ತು. ಆದರೆ ಪ್ರಸ್ತುತ 70 ಕಿ.ಮೀ ಮೆಟ್ರೋ ರೈಲು ಸಂಪರ್ಕ ವ್ಯಾಪ್ತಿಯನ್ನು ಹೊಂದಿದೆ" ಎಂದರು.
"2014ಕ್ಕೂ ಮೊದಲು ಭಾರತ ಹೊಂದಿದ್ದ ಏರ್ಪೋರ್ಟ್‌ಗಳ ಸಂಖ್ಯೆ 74. ಪ್ರಸ್ತುತ 148 ನಿಲ್ದಾಣಗಳು ಇವೆ. ಮುಂದಿನ 5 ವರ್ಷಗಳಲ್ಲಿ ಇಡೀ ದೇಶದಲ್ಲಿ 200 ಏರ್ಪೋರ್ಟ್‌ಗಳು ಕಾರ್ಯಾಚರಣೆ ನಡೆಸಲಿವೆ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಕೈಗೊಂಡಿದ್ದು, ಕ್ಷಿಪ್ರ ಗತಿಯ ಅಭಿವೃದ್ಧಿಯು ಭಾರತವನ್ನು ವಿಶ್ವದ ಪ್ರಬಲ ಆರ್ಥಿಕತೆಗಳ ಸಾಲಿನಲ್ಲಿ ನಿಲ್ಲಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಸರ್ಕಾರದ ನೇತೃತ್ವದಲ್ಲಿ ಶೀಘ್ರವೇ Advanced Air Mobility or Advanced Short haul Aircraft ( ASHA) ಕನಸು ನನಸಾಗಲಿದೆ ಎಂಬುದು ಗಮನಾರ್ಹ" ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, "ಇಡೀ ಭಾರತದಲ್ಲಿ ಅತಿ ಹೆಚ್ಚು ಏರ್ಪೋರ್ಟ್‌ಗಳನ್ನು ಕರ್ನಾಟಕ ಹೊಂದಿದ್ದು, ಸಮಸ್ತ ಕರ್ನಾಟಕದ ಜನತೆಯ ಪರವಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮತದಾನ ನಮ್ಮ ಜವಾಬ್ದಾರಿಯುತ ಹಕ್ಕು. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಪ್ರತಿಯೊಂದು ನಿರ್ಧಾರದ ಹಿಂದೆ ರಾಜಕೀಯ ಕಾರಣ ಇದ್ದೇ ಇರುತ್ತದೆ. ನಮ್ಮ ಒಂದು ಮತ ಈ ಎಲ್ಲ ಪ್ರಕ್ರಿಯೆಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಪೂರಕವಾಗುತ್ತದೆ" ಎಂದರು.
"ರಾಜಕಾರಣದ ನೀತಿ ನಿಯಮಾವಳಿಗಳನ್ನು ನಿರ್ಧರಿಸಲು, ರೂಪಿಸಲು ನಮ್ಮ ಒಂದು ಮತ ಅತ್ಯಂತ ನಿರ್ಣಾಯಕ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆಗೆ ನಡೆಯಲಿದೆ. ರಾಜ್ಯ, ದೇಶದ ಹಿತಕ್ಕಾಗಿ ಕಾರ್ಯ ನಿರ್ವಹಿಸುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಅವಧಿಯಲ್ಲಿ ಆಗಿರುವ ಪ್ರಗತಿ, ಸಾಧನೆಗಳು ಗಮನಾರ್ಹ" ಎಂದು ತಿಳಿಸಿದರು.
ಇದನ್ನೂ ಓದಿ: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ನಿವಾಸ್ ಯೋಜನೆ ಜಾರಿ : ಸಚಿವ ಶಿವರಾಂ ಹೆಬ್ಬಾರ್