ಬೆಂಗಳೂರು: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಇನ್ನೆರಡು ದಿನದಲ್ಲೇ ಮದ್ಯ ತುಟ್ಟಿಯಾಗಲಿದೆ. ಶೇ.17 ರಷ್ಟು ಕರಭಾರವನ್ನು ಗ್ರಾಹಕರು ಭರಿಸಬೇಕಿದೆ.
ಕೆಲ ರಾಜ್ಯಗಳಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳಗೊಂಡು ದುಬಾರಿಯಾದ ಬೆನ್ನಲ್ಲೇ ರಾಜ್ಯದಲ್ಲಿಯೂ ಇನ್ನೆರಡು ದಿನಗಳಲ್ಲಿ ಮದ್ಯ ತುಟ್ಟಿಯಾಗಲಿದೆ. ಇನ್ನೆರಡು ದಿನದಲ್ಲಿ ಹೊಸ ದರಪಟ್ಟಿ ವೈನ್ ಸ್ಟೋರ್‌ಗಳನ್ನು ತಲುಪಲಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮದ್ಯದ ಮೇಲಿನ ತೆರಿಗೆಯನ್ನು ಶೇ 6ರಷ್ಟು ಹೆಚ್ಚಳ ಮಾಡುವುದಾಗಿ ಈ ಹಿಂದೆ ಬಜೆಟ್‌ನಲ್ಲಿಯೇ ಘೋಷಣೆ ಮಾಡಲಾಗಿತ್ತು. ಅದರ ಜೊತೆಗೆ ಮತ್ತೆ ಶೇ. 11 ರಷ್ಟು ಹೆಚ್ಚಿಸಿದ್ದು, ಒಟ್ಟು ಶೇ. 17 ರಷ್ಟು ತೆರಿಗೆ ಹೆಚ್ಚಳವಾಗಲಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಹೊಸ ದರದ ಲೇಬಲ್‌ಗಳೊಂದಿಗೆ ಮಾರಾಟ ಆರಂಭವಾಗಲಿದೆ ಎಂದು ತಿಳಿಸಿದರು.
ಲಾಕ್ ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರ ರಾಜಸ್ವ ಸಂಗ್ರಹಕ್ಕೆ ಅಬಕಾರಿ ಸುಂಕ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಮದ್ಯ ಮಾರಾಟದಿಂದ ದೊಡ್ಡ ಮೊತ್ತದ ಆದಾಯ ಸರ್ಕಾರದ ಖಜಾನೆಗೆ ಬರುತ್ತಿದ್ದು, ಇದೀಗ ತೆರಿಗೆ ಹೆಚ್ಚಳದಿಂದ ಶೇ.17 ರಷ್ಟು ಆದಾಯ ಹೆಚ್ಚುವರಿಯಾಗಿ ಬರಲಿದೆ ಎನ್ನುವ ನಿರೀಕ್ಷೆ ಇದೆ.