ಬೆಂಗಳೂರು : ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಬೇಕೋ ಬೇಡವೋ ಎಂಬ ದೊಡ್ಡ ಚರ್ಚೆ-ವಾದ-ವಿವಾದ ನಂತರ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಎಲ್ಕೆಜಿ, ಯುಕೆಜಿ ಮತ್ತು 5ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ನಡೆಸದಂತೆ ಸೂಚಿಸಿದ್ದರು. ಆದರೆ, ಹಲವು ಶಾಲೆಗಳು ಸುತ್ತೋಲೆ ಆದೇಶ ಬಾರದ ಕಾರಣ ತಮ್ಮ ಪಾಡಿಗೆ ತಾವು ಆನ್‌ಲೈನ್ ಶಿಕ್ಷಣ ನಡೆಸುತ್ತಿದ್ದರು.
ಸಚಿವರ ಮಾತಿಗೂ ಕಿಮ್ಮತ್ತು ಕೊಡದ ಖಾಸಗಿ ಶಾಲೆಗಳು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಸಚಿವರು ಸೂಚಿಸಿ ವಾರ ಕಳೆದರೂ ಸಹ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದೇ ತಡ ಮಾಡಿದ್ದರು. ತಡವಾಗಿದ್ದು ಖಾಸಗಿ ಶಾಲೆಗಳ ಲಾಬಿಯಾ ಎಂಬ ಅನುಮಾನ ಕೂಡ ಶುರುವಾಗಿತ್ತು. ಇದೆಲ್ಲವೂ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ, ವಾರದ ನಂತರ ಆನ್‌ಲೈನ್ ಬೋಧನೆ ಕುರಿತಾದ ಸರ್ಕಾರಿ ಆದೇಶ ಹೊರ ಬಂದಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್/ಆಫ್‌ಲೈನ್ ತರಗತಿಗಳನ್ನು ನಡೆಸಲು ಸಮಿತಿ ರಚಿಸಿದೆ.
ಪ್ರಾಥಮಿಕ ಹಂತದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ಶಿಕ್ಷೆಗೆ ಸದ್ಯ ಬ್ರೇಕ್ ಹಾಕಲಾಗಿದೆ. 6ನೇ ತರಗತಿಯಿಂದ 10ರವರೆಗಿನ ಉನ್ನತ ತರಗತಿಗಳಲ್ಲಿ ಆನ್‌ಲೈನ್ ಶಿಕ್ಷಣದ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಮತ್ತು ಆ ಕುರಿತಂತೆ ಮಾರ್ಗಸೂಚಿಗಳನ್ನು ರೂಪಿಸಲು ಹಿರಿಯ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ.
ಎಲ್‌ಕೆಜಿಯಿಂದ ಐದನೇ ತರಗತಿವರೆಗೆ ಆನ್‌ಲೈನ್ ಹೊರತುಪಡಿಸಿ ತಂತ್ರಜ್ಞಾನ ಆಧಾರಿತ ಬೋಧನೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಸಹ ಈ ಸಮಿತಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲಿದೆ. ಸಮಿತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪ್ರೊ. ಎಂ ಕೆ ಶ್ರೀಧರ್, ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಗುರುರಾಜ ಕರ್ಜಗಿ, ಡಾ. ವಿ ಪಿ ನಿರಂಜನಾರಾಧ್ಯ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಪ್ರತಿನಿಧಿಗಳಾದ ಹೃಷಿಕೇಶ್, ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರು, ಅರ್ಲಿ ಚೈಲ್ಡ್ ಹುಡ್ ಸಂಘಟನೆಯ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇರುತ್ತಾರೆ.