ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಆ ಕುರಿತು ಪರಾಮರ್ಶಿಸಲು ಸಚಿವ ಸಂಪುಟದ ಉಪಸಮಿತಿ ರಚಿಸಿ ಇಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಅದನ್ನು ಪರಾಮರ್ಶಿಸಲು ಈ ಕೆಳಕಂಡ ಸಚಿವರುಗಳನ್ನೊಳಗೊಂಡ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆ.
ಉಪ ಸಮಿತಿಯ ಅಧ್ಯಕ್ಷರನ್ನಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸಮಿತಿ ಸದಸ್ಯರಾಗಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೋವಿಡ್ಗೆ ಸಂಬಂಧಿಸಿದಂತೆ ಸಭೆ ನಡೆಸಿ, ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿತ್ತು. ಕೋವಿಡ್ ನಿರ್ವಹಣೆ ಮಾಡಲು ಸಂಪುಟ ಉಪ ಸಮಿತಿ ರಚಿಸಿ, ಔಷಧ ಖರೀದಿ, ಮಾಸ್ಕ್ ಕಡ್ಡಾಯ ಸೇರಿದಂತೆ ಎಲ್ಲ ವಿಷಯವನ್ನೂ ಸಂಪುಟ ಉಪ ಸಮಿತಿ ನಿರ್ಧಾರ ಮಾಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು.
ಅದೇ ರೀತಿ ನಿನ್ನೆ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ನಿರ್ವಹಣೆಗೆ ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ ಪಡೆಯಲಾಗಿತ್ತು. ಯಾವುದೇ ಕಾರಣಕ್ಕೆ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು. ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಇರಬಾರದು. ಇತರ ರೋಗ ಇರುವವರನ್ನೂ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆಗೆ ಒಳಪಡಿಸಬೇಕು, ಕೋವಿಡ್ಗೆ ಸಂಬಂಧಿಸಿದ ಚಿಕಿತ್ಸೆಯನ್ನೂ ಮಾಡಬೇಕು. ಯಾವುದೇ ಕೊರತೆ ಆಗಬಾರದು. ಔಷಧಿ ಕೊರತೆ ಆಗಬಾರದು, ಯಾರಿಗಾದರೂ ಅಗತ್ಯವಿದ್ದಲ್ಲಿ ವ್ಯಾಕ್ಸಿನ್ ಹಾಕಿ, ವ್ಯಾಕ್ಸಿನ್ ತೆಗೆದುಕೊಳ್ಳದವರಿಗೆ ವ್ಯಾಕ್ಸಿನೇಷನ್ ಮಾಡಲು ಸಿಎಂ ಸೂಚಿಸಿದ್ದರು.
ಇದನ್ನೂ ಓದಿ: ದಕ್ಷಿಣ ಕನ್ನಡ: ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆ
ರಾಜ್ಯದಲ್ಲಿ 92 ಜನರಿಗೆ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ. ಬೆಂಗಳೂರು ನಗರದಲ್ಲೇ 80 ಇದೆ. ಮೈಸೂರು 5, ಬಳ್ಳಾರಿ 3, ರಾಮನಗರ, ಮಂಡ್ಯದಲ್ಲಿ ತಲಾ 1 ಪಾಸಿಟಿವ್ ಇದೆ. 72 ಜನರಿಗೆ ಮನೆಯಲ್ಲೇ ಕ್ವಾರಂಟೈನ್ಗೆ ಸೂಚಿಸಿದ್ದು 20 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನ ಐಸಿಯುನಲ್ಲಿದ್ದಾರೆ. ಪ್ರತಿದಿನ 5 ಸಾವಿರ ಟೆಸ್ಟ್ಗೆ ತಾಂತ್ರಿಕ ಸಲಹಾ ಸಮಿತಿಯವರು ಹೇಳಿದ್ದಾರೆ. ರ‍್ಯಾಪಿಡ್ 1500 ಮತ್ತು ಆರ್ಟಿಪಿಸಿಆರ್ 3500 ಟೆಸ್ಟ್ ಸೇರಿ 5 ಸಾವಿರ ಟೆಸ್ಟ್ ಶನಿವಾರದಿಂದ ಆರಂಭಿಸಲಾಗುತ್ತದೆ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.