ಬೆಂಗಳೂರು: ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರಿಂದ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಸರ್ಕಾರ ಕ್ವಾರಂಟೈನ್ ನಿಯಮಗಳಲ್ಲಿ ಕೆಲ ಪರಿಷ್ಕರಣೆ ಮಾಡಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದಾರೆ. ಅದರಂತೆ ಕ್ವಾರಂಟೈನ್ ಕಲಾವಾಧಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.
![Karnataka government changed quarantine rules](https://etvbharatimages.akamaized.net/etvbharat/prod-images/kn-bng-04-quarentain-normchange-script-7201951_15062020205456_1506f_1592234696_923.jpg)
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರನ್ನು ಏಳು ದಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಬಳಿಕ ಅವರು ಕಡ್ಡಾಯವಾಗಿ ಏಳು ದಿನ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕು. ತಮಿಳುನಾಡು, ದೆಹಲಿಯಿಂದ ಬರುವವರು ಮೂರು ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 11 ದಿನ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕು. ಅದೇ ರೀತಿ ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ಹೊರತಾಗಿ ಇತರ ರಾಜ್ಯದಿಂದ ಬರುವವರು 14 ದಿನ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ.
ಉಳಿದಂತೆ ಉದ್ಯಮಿಗಳು, ರಾಜ್ಯದಿಂದ ಹಾದು ಹೋಗುವ ಪ್ರಯಾಣಿಕರು ಮತ್ತು ವಿಶೇಷ ಪ್ರಯಾಣಿಕರಿಗೆ ಈ ಮೊದಲು ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಅನ್ವಯವಾಗಲಿದೆ. ರಾಜ್ಯಕ್ಕೆ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು, ವಿಳಾಸ ನೋಂದಣಿ ಮಾಡಬೇಕು. ಎಲ್ಲಾ ಸಾರಿಗೆ ಸಂಸ್ಥೆಗಳು, ವಿಮಾನ ಸಂಸ್ಥೆಗಳು, ರೈಲ್ವೆ ಅಧಿಕಾರಿಗಳು ಸಂಚರಿಸುವ ಪ್ರಯಾಣಿಕರು ಸೇವಾ ಸಿಂಧುವಿನಲ್ಲಿ ವಿವರ ನೋಂದಣಿ ಮಾಡಿದ್ದಾರಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿಯಮ ಉಲ್ಲಂಘಿಸಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.