ಬೆಂಗಳೂರು: ಹೈಕೋರ್ಟ್ ತೀರ್ಪಿನನ್ವಯ ರಾಜ್ಯ ಸರ್ಕಾರ ಎಸಿಬಿ ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಆಗಸ್ಟ್ 11ರಂದು ಎಸಿಬಿ ರದ್ದುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದರ ಅನ್ವಯ ಇದೀಗ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ರದ್ದು ಮಾಡಿದೆ.
ಹೈಕೋರ್ಟ್ ಆದೇಶದನ್ವಯ ಸರ್ಕಾರದ ಅಧಿಸೂಚನೆ ಫೆ. 6, 1991, ಮೇ 8, 2002 ಹಾಗೂ ಡಿ.5, 2002ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಉಪಬಂಧ 2(ಎಸ್)ರನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣಾಧಿಕಾರವನ್ನು ನೀಡಿ ಆದೇಶಿಸಿದ್ದ ಸರ್ಕಾರದ ಅಧಿಸೂಚನೆಗಳನ್ನು ಪುನರುಜ್ಜಿವನಗೊಳಿಸಿ ಆದೇಶಿಸಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವುದರಿಂದ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ/ಪೊಲೀಸ್ ಠಾಣೆಗಳೆಂದು ಘೋಷಿಸಿ ರಾಜ್ಯವ್ಯಾಪ್ತಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡೆಯಲಾಗಿದೆ. ಇದರಿಂದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು/ವಿಚಾರಣೆಗಳು/ಇತರ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಎಸಿಬಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ