ಬೆಂಗಳೂರು: ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯಿದೆಗೆ ತಿದ್ದುಪಡಿ ತಂದು ರಾಜ್ಯದ ಜಿಡಿಪಿಯ ಶೇ.5ರವರೆಗೆ ಸಾಲ ಪಡೆಯಲು ಅವಕಾಶ ಮಾಡಿಕೊಳ್ಳುವ ಸಲುವಾಗಿ ಆರ್ಥಿಕ ಹೊಣೆಗಾರಿಕೆ ವಿಧೇಯಕ-2020ನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಸಚಿವ ಸಂಪುಟದ ನಿರ್ಧಾರದಂತೆ ವಿಧಾನಸಭೆಯಲ್ಲಿ ಮಂಡನೆಯಾಗಿರುವ ವಿಧೇಯಕಕ್ಕೆ ಒಪ್ಪಿಗೆ ದೊರೆತರೆ ಈವರೆಗೆ ಜಿಡಿಪಿಯ ಶೇ.3 ರಷ್ಟು ಸಾಲ ಪಡೆಯಲು ಇದ್ದ ಮಿತಿ ಶೇ.5ಕ್ಕೆ ಹೆಚ್ಚಾಗಲಿದೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಬಜೆಟ್‌ನಲ್ಲಿ ತಿಳಿಸಿರುವ ಸಾಲದ ಜತೆಗೆ 36 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚುವರಿ ಸಾಲ ಮಾಡಲು ಅವಕಾಶ ಕಲ್ಪಿಸಿದಂತಾಗಲಿದೆ. ಸಚಿವ ಸಂಪುಟದಲ್ಲಿ ನಿರ್ಧರಿಸಿರುವಂತೆ 33 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲ ಮಾಡಿದರೆ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.19 ಲಕ್ಷ ಕೋಟಿ ರೂ.ಗಳಷ್ಟಾಗಲಿದೆ.
ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರಸಕ್ತ ವರ್ಷದಲ್ಲಿ 2.37 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿದ್ದು 1,79,920 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ತೆರಿಗೆ ಮತ್ತಿತರ ಆದಾಯ 1.14 ಲಕ್ಷ ಕೋಟಿ ರೂ.ಗೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ 65.8 ಕೋಟಿ ರೂ. ಹಣದ ಕೊರತೆ ಎದುರಾಗಲಿದೆ.
ಪ್ರಸ್ತುತ ಜಿಡಿಪಿಯ ಶೇ.2.23 ರಷ್ಟು ಹೊಣೆಗಾರಿಕೆ (ಸಾಲ) ಹೊಂದಿದ್ದೇವೆ. ಕೊರೊನಾ ಸಂಕಷ್ಟದಿಂದಾಗಿ ಕೇಂದ್ರ ಸರ್ಕಾರವು ಶೇ.3 ರಿಂದ 5ರವರೆಗೆ ಸಾಲ ಪಡೆಯಲು ಅವಕಾಶ ನೀಡಿದೆ. ಇದರಿಂದ 36,700 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ.
ಜಿಎಸ್‌ಟಿ ಪರಿಹಾರ 11,324 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಮರುಪಾವತಿ ಭರವಸೆಯೊಂದಿಗೆ ಸಾಲ ಮಾಡಲು ಅವಕಾಶ ನೀಡಲಾಗಿದೆ. ಇವುಗಳೆಲ್ಲದರ ಪರಿಣಾಮ ಈ ಆರ್ಥಿಕ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4.19 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟಾದರೂ ಒಟ್ಟು ಜಿಡಿಪಿ ಉತ್ಪನ್ನದ ಶೇ.23.2ರಷ್ಟು ಮಾತ್ರ ಸಾಲ ಆಗಲಿದೆ. ಶೇ.25ಕ್ಕಿಂತ ಹೆಚ್ಚಿರಬಾರದು ಎಂಬ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ನಿಯಮಗಳ ಅಡಿಯೇ ಇರುತ್ತದೆ ಎಂದರು.