ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಟಿಕೆಟ್ ಕೈ ತಪ್ಪಿದ ಕೆಲವು ಹಾಲಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೆಲವರಿಗೆ ಪಕ್ಷ ಟಿಕೆಟ್ ನೀಡಿಲ್ಲ, ಅವರಿಗೆ ಬೇರೆ ಜವಾಬ್ದಾರಿ ನೀಡಲಾಗುತ್ತದೆ. ಇದರರ್ಥ ಕೇಂದ್ರಕ್ಕೂ ಕರೆಸಿಕೊಳ್ಳಬಹುದು. ಹಾಗಾಗಿ ಪರಿವರ್ತನೆಗೆ ಯಾರೂ ಬೇಸರಗೊಳ್ಳಬೇಡಿ ಎಂದು ರಾಜ್ಯ ಚುನಾವಣೆ ಸಹ ಉಸ್ತುವಾರಿ ಅಣ್ಣಾಮಲೈ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯದಲ್ಲಿ ಜಿಲ್ಲಾ ಸಮಿತಿಗಳಿಂದ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಸಮಿತಿಯಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿಯೂ ಸಭೆ ಮಾಡಿ ಟಿಕೆಟ್ ನೀಡಲಾಗಿದೆ. ಎಲ್ಲ ರೀತಿಯ ಅಭಿಪ್ರಾಯದ ಮೂಲಕವೇ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಟಿಕೆಟ್ ಸಿಗದಿರುವುದಕ್ಕೆ ಬಂಡಾಯ ಆಗೋದು ಸಾಮಾನ್ಯ. ಪ್ರತಿ ಕ್ಷೇತ್ರದಲ್ಲಿ ನಾಲ್ಕೈದು ಆಕಾಂಕ್ಷಿಗಳಿರುತ್ತಾರೆ. ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ. ಉಳಿದವರಿಗೆ ಪಕ್ಷ ಸ್ಥಾನಮಾನ ನೀಡಲಿದೆ ಎಂದರು. ಕಾಂಗ್ರೆಸ್ನಲ್ಲಿ ಟಿಕೆಟ್ ಇಲ್ಲ ಅಂದರೆ ಅಲ್ಲಿ ಕೆಲಸ ಮಾಡಲ್ಲ. ಆದರೆ ನಮ್ಮಲ್ಲಿ ಟಿಕೆಟ್ ಇಲ್ಲ ಅಂದ್ರೂ ಕೆಲಸ ಮಾಡುತ್ತಾರೆ. ಸೀನಿಯರ್ಗಳ ಜತೆ ವರಿಷ್ಠರು ಮಾತನಾಡುತ್ತಿದ್ದಾರೆ. ಅವರು ಕೂಡ ಕೇವಲ ಎಂಎಲ್ಎ ಸ್ಥಾನ ಮಾತ್ರ ನೋಡಬಾರದು. ಮುಂದೆ ಪಕ್ಷದಲ್ಲಿ ಬೇರೆ ಬೇರೆ ಉನ್ನತ ಹುದ್ದೆ ನೋಡಬೇಕು ಎಂದು ಸಲಹೆ ನೀಡಿದರು.
ಉಡುಪಿ ಶಾಸಕರು ಒಳ್ಳೆಯವರೇ, ಆದರೆ ಹೊಸಬರಿಗೆ ಅವಕಾಶ ಕೊಡಲು ಬದಲಾವಣೆ ಮಾಡಿದ್ದೇವೆ. ಪರಿವರ್ತನೆಯಿಂದ ಯಾರೂ ಬೇಸರ ಆಗೋದು ಬೇಡ. ಟಿಕೆಟ್ ಸಿಗದವರಿಗೂ ಒಂದು ದಾರಿ ಇದೆ. ಆ ದಾರಿಯಲ್ಲಿ ಪಕ್ಷ ಎಲ್ಲರನ್ನೂ ಕರೆದುಕೊಂಡು ಹೋಗುತ್ತದೆ. ನಮ್ಮೆಲ್ಲರಿಗೂ ಒಂದಲ್ಲೊಂದು ದಾರಿ ಇದೆ ಎಂದು ಸೂಚ್ಯವಾಗಿ ತಿಳಿಸಿದರು.
ಜಗದೀಶ್ ಶೆಟ್ಟರ್ ದೊಡ್ಡವರು. ಪಕ್ಷ ಸಂಘಟನೆ ಮಾಡಿದ್ದಾರೆ. ಹೈಕಮಾಂಡ್ ಬಳಿಯೂ ಚರ್ಚೆ ಮಾಡಿದ್ದಾರೆ. ಈಶ್ವರಪ್ಪ ಈಗಾಗಲೇ ರಾಜಕೀಯ ನಿವೃತ್ತಿ ಹೊಂದಿರುವುದಾಗಿ ಪತ್ರ ಬರೆದಿದ್ದಾರೆ. ಅವರು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿದ್ದಾರೆ. 35-40 ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದಾರೆ. ಅವರೆಲ್ಲರ ಕೊಡುಗೆಯನ್ನು ಪಕ್ಷ ಎಂದಿಗೂ ಮರೆಯಲ್ಲ ಎಂದರು.
ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ನಷ್ಟ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಅಚ್ಚರಿ ಅಭ್ಯರ್ಥಿಗಳ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಹೊಂದಾಣಿಕೆ ರಾಜಕಾರಣದಿಂದ ಪಕ್ಷ ಹಾಳಾಗುತ್ತಿದೆ ಎಂಬ ಆರೋಪವಿದೆ. ಅದಕ್ಕಾಗಿ ಹೊಂದಾಣಿಕೆ ರಾಜಕಾರಣ ಇರಬಾರದೆಂದು ಡಿ.ಕೆ.ಶಿವಕುಮಾರ್ ವಿರುದ್ಧ ಅಶೋಕ್, ಸಿದ್ದರಾಮಯ್ಯ ವಿರುದ್ಧ ಸೋಮಣ್ಣನವರನ್ನು ಹಾಕಿದ್ದೇವೆ ಎಂದರು.
ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ರಾವ್ ಬದಲಾವಣೆ ವಿಚಾರಕ್ಕೆ, ಸರ್ಕಾರದಲ್ಲಿ ಕೆಲಸ ಮಾಡಿದವರನ್ನು ಚುನಾವಣಾ ಅಖಾಡಕ್ಕೆ ತಂದುಬಿಡಲಾಗಿದೆ. ಜನಸೇವೆ ಮಾಡಬೇಕು ಎಂದು ಬಂದವರನ್ನು ಒಪ್ಪಿಕೊಳ್ಳಬೇಕು. ಪಕ್ಷದ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡು ಕೆಲಸ ಮಾಡಬೇಕು ಎಂದು ಚಾಮರಾಜಪೇಟೆ ಅಭ್ಯರ್ಥಿ ಭಾಸ್ಕರ್ ರಾವ್ ಬದಲಾವಣೆಗೆ ಪಟ್ಟು ಹಿಡಿದಿರುವ ಸೈಲೆಂಟ್ ಸುನೀಲ್ ಬೆಂಬಲಿಗರಿಗೆ ಅಣ್ಣಾಮಲೈ ಕಿವಿಮಾತು ಹೇಳಿದರು.
ಇದನ್ನೂಓದಿ: ಕೆಲವರು ಬೇರೆ ಪಕ್ಷದ ವಾಹನದಲ್ಲಿ ಕುಳಿತು ಪಕ್ಷಕ್ಕೆ ಚೂರಿ ಹಾಕುತ್ತಿದ್ದಾರೆ: ಯತ್ನಾಳ