ಬೆಂಗಳೂರು: ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಕರ್ನಾಟಕ ಉತ್ತಮ ಕೆಲಸ ಮಾಡುತ್ತಿದ್ದು, ಇತರೆ ರಾಜ್ಯಗಳಿಗೆ ಕರ್ನಾಟಕದ ಗ್ರಾ.ಪಂಚಾಯತ್ ಮಾದರಿಯಾಗಿದೆ ಎಂದು ಪಂಚಾಯತ್ ರಾಜ್ ಕೇಂದ್ರ ರಾಜ್ಯ ಸಚಿವ ಕಪಿಲ್ ಮೋರೇಶ್ವರ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಕಾಸೌಧದಲ್ಲಿ ಮಾತನಾಡಿದ ಅವರು, ಡಿಜಿಟಲ್ ಲೈಬ್ರೇರಿ, ಆರ್ ಒ ಪ್ಲಾಂಟ್ ಪ್ಲಾನ್ ಪ್ರಶಂಸನೀಯ. ಗ್ರಾ.ಪಂಚಾಯತಿಯಲ್ಲಿನ ಶಾಲೆಗಳು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ. ಇಲ್ಲಿನ ಗ್ರಾ.ಪಂ. ಹೊಸ ಪರಿಕಲ್ಪನೆ ಇದೆ. ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಕರ್ನಾಟಕ ಉತ್ತಮ ಕೆಲಸ ಮಾಡುತ್ತಿದೆ. ಕರ್ನಾಟಕಕ್ಕೆ ತಡವಾಗಿ ಬಂದಿದ್ದೇನೆ. ಐದು ಇತರ ರಾಜ್ಯಗಳಿಗೆ ಭೇಟಿ ಬಳಿಕ ಇಲ್ಲಿಗೆ ಬಂದಿದ್ದೇನೆ. ಕರ್ನಾಟಕಕ್ಕೆ ಮೊದಲು ಬಂದಿದ್ದರೆ, ಆ ರಾಜ್ಯಗಳಿಗೆ ಕರ್ನಾಟಕದಲ್ಲಿನ ಉತ್ತಮ ಕೆಲಸದ ಬಗ್ಗೆ ಹೇಳುತ್ತಿದ್ದೆ ಎಂದು ಹೇಳಿದರು.
ಇದನ್ನೂ ಓದಿ: ನಿರುದ್ಯೋಗಿಗಳಾಗಿದ್ದಾಗ ಕಾಂಗ್ರೆಸ್ನವರು ಪಾದಯಾತ್ರೆ ಮಾಡ್ತಾರೆ: ಗೋವಿಂದ ಕಾರಜೋಳ
ಕೆಲ ರಾಜ್ಯದ ಸರಪಂಚ್ರನ್ನು ಇಲ್ಲಿನ ಗ್ರಾಮ ಪಂಚಾಯತಿಗಳಿಗೆ ಕಳುಹಿಸಲು ಸೂಚನೆ ನೀಡುತ್ತೇನೆ. ಗ್ರಾಮೀಣ ವಿಕಾಸ ಅಭಿವೃದ್ಧಿಗೆ ಪೂರಕವಾದುದು. ಪ್ರಧಾನಿಯವರ ಗುರಿಯೂ ಇದೇ ಆಗಿದೆ. ಗ್ರಾಮೀಣ ವಿಕಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ. ಹಾಗಾಗಿ ನಮ್ಮ ಗುರಿ ಗ್ರಾಮಗಳ ವಿಕಾಸ ಎಂದು ಹೇಳಿದರು.
ದೊಡ್ಡಜಾಲ ಗ್ರಾ.ಪಂಗೆ ಭೇಟಿ:
ನಿನ್ನೆ ನಾನು ಕೆಲವು ಕಡೆ ಭೇಟಿ ಕೊಟ್ಟಿದ್ದೆ. ಈ ವೇಳೆ, ದೊಡ್ಡಜಾಲ ಗ್ರಾ.ಪಂಗೆ ಭೇಟಿ ನೀಡಿದ್ದೆ. ಅಲ್ಲಿ ನಮ್ಮ ಯೋಜನೆಗಳು ಜಾರಿಯಾಗಿವೆ. ಅಮೃತ್ ಯೋಜನೆ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿದೆ. ನಮ್ಮ ಯೋಜನೆಗಳು ಗ್ರಾಮಗಳಿಗೆ ತಲುಪಿವೆ. ಕರ್ನಾಟಕ ಉತ್ತಮ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸರ್ಕಾರ ನಮಗೆ ಯಾವತ್ತೂ ಬೆಂಬಲ ಕೊಡುತ್ತಲೇ ಬಂದಿದೆ. ಘನತ್ಯಾಜ್ಯ ವಿಲೇವಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲು ನಿರ್ಧರಿಸಿದ್ದೇವೆ. ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗಾಗಿ ಸುಮಾರು 70% ಹೆಚ್ಚು ಭೂಮಿ ಲಭ್ಯವಿದೆ. ಎಲ್ಲಾ ಪ್ರಯತ್ನಕ್ಕೂ ಕೇಂದ್ರ ಸರ್ಕಾರ ನಮಗೆ ನೆರವು ನೀಡುತ್ತಿದೆ ಎಂದು ತಿಳಿಸಿದರು.