ಭೋಪಾಲ್, ಮಧ್ಯಪ್ರದೇಶ: ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿದೆ. ಚುನಾವಣೆ ಹಿನ್ನೆಲೆ ಪ್ರತಿಯೊಂದು ಪಕ್ಷವೂ ಸಕ್ರಿಯಗೊಂಡಿವೆ. ಅಧಿಕಾರದ ಚುಕ್ಕಾಣಿಗಾಗಿ ಪಕ್ಷದ ಹಿರಿಯ ನಾಯಕರೇ ಪ್ರಚಾರಕ್ಕೆ ಧುಮುಕುತ್ತಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದ Deputy CM Shivakumar ಎರಡು ದಿನಗಳ ಕಾಲ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ತಿಳಿಸಿದೆ. ಆದರೆ ರಾಜಕೀಯ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿದುಬಂದಿದೆ.
ಹೌದು, ಇಂದು ಮಧ್ಯಾಹ್ನ 2 ಗಂಟೆಗೆ ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ. ಇಂದು ಅವರು ಸುಮಾರು 70 ಕಿಮೀ ದೂರದ ಡಾಟಿಯಾಗೆ ತೆರಳಿದ್ದಾರೆ. ರಾಜ್ಯ ಕಾಂಗ್ರೆಸ್‌ನಿಂದ ಬಂದ ಮಾಹಿತಿಯ ಪ್ರಕಾರ, ಶಿವಕುಮಾರ್ ಅವರು ದಾತಿಯಾದಲ್ಲಿರುವ ಪೀತಾಂಬರ ಪೀಠ ಎಂದೂ ಕರೆಯಲ್ಪಡುವ ಬಗ್ಲಾಮುಖಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಪೀತಾಂಬರ ಪೀಠದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಶಿವಕುಮಾರ್ 7.30ಕ್ಕೆ ಇಂದೋರ್‌ಗೆ ತೆರಳಲಿದ್ದಾರೆ.
ಇಂದೋರ್‌ನಿಂದ ಅವರು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಉಜ್ಜಯಿನಿ ಭೇಟಿ ನೀಡಲಿದ್ದಾರೆ. ಮುಂಜಾನೆ ನಡೆಯುವ ‘ಭಸ್ಮ ಆರತಿ’ಯಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಬಳಿಕ ಕಾಲಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಶಿವಕುಮಾರ್ ಭಾನುವಾರ ಬೆಳಗ್ಗೆ ಇಂದೋರ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮರಳಲಿದ್ದಾರೆ.
ಕಳೆದ ಕೆಲವು ವಾರಗಳಿಂದ, ಶಿವಕುಮಾರ್ ಮಧ್ಯಪ್ರದೇಶದಲ್ಲಿ ಸಕ್ರಿಯರಾಗುತ್ತಾರೆ ಎಂದು ರಾಜಕೀಯ ವಲಯಗಳಲ್ಲಿ ಗುಸುಗುಸು ಇತ್ತು. ಆದರೆ, ಅವರ ಎರಡು ದಿನಗಳ ಭೇಟಿಯಲ್ಲಿ ಅವರು ಭೋಪಾಲ್‌ಗೆ ಭೇಟಿ ನೀಡುತ್ತಿಲ್ಲ. ಅವರು ಕೇವಲ ದೇವಾಲಯಗಳಿಗೆ ಮಾತ್ರ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಒಂದೆರಡು ತಿಂಗಳ ಹಿಂದೆ ಶೃಂಗೇರಿಗೆ ಭೇಟಿ: ವಿಧಾನಸಭಾ ಚುನಾವಣೆ ಮತದಾನಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಟುಂಬ ಶೃಂಗೇರಿಗೆ ಭೇಟಿ ನೀಡಿತ್ತು. ಆಗ ಅವರು ಶಾರದಾ ಪೀಠದಲ್ಲಿ ಚಂಡಿಕಾ ಯಾಗ ನೆರವೇರಿಸಿದ್ದರು. ಇದಾದ ಬಳಿಕ ಅವರು ಮಠಕ್ಕೆ ಭೇಟಿ ನೀಡಿದ್ದರು.
ತಿಂಗಳ ಹಿಂದೆ ಅಜ್ಜಯ್ಯನ ಮಠಕ್ಕೆ ಡಿಕೆಶಿ ಭೇಟಿ: ಕಳೆದ ಮೇ ತಿಂಗಳಲ್ಲಿ ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳಿದ್ದರು. ಯಾವುದೇ ಕೆಲಸ ಮಾಡುವ ಮುನ್ನ ತುಮಕೂರಿನಲ್ಲಿರುವ ಅಜ್ಜಯ್ಯನ ಮಠಕ್ಕೆ ತೆರಳಿ ಆಶೀರ್ವಾದ ಪಡೆಯುತ್ತೇನೆ ಎಂದು ಡಿಕೆಶಿ ಹಲವು ಬಾರಿ ಹೇಳಿದ್ದು, ಸಂಪ್ರದಾಯ ಮುಂದುವರಿಸಿದ್ದರು.
12ಕ್ಕೆ ಪ್ರಿಯಾಂಕಾ ಗಾಂಧಿ ಪ್ರಚಾರ: ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಭದ್ರಕೋಟೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜೂನ್ 12 ರಂದು ಜಬಲ್ಪುರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಬುಧವಾರ ಈ ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಉಪಾಧ್ಯಕ್ಷ ಚಂದ್ರಪ್ರಭಾಷ್ ಶೇಖರ್ ಸುದ್ದಿಗಾರರೊಂದಿಗೆ ಮಾತನಾಡಿ, ''ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಜೂನ್ 12 ರಂದು ಬೆಳಗ್ಗೆ 10.30 ರ ಸುಮಾರಿಗೆ ಜಬಲ್‌ಪುರ ತಲುಪಲಿದ್ದು, ವಿಮಾನ ನಿಲ್ದಾಣದಿಂದ ಗ್ವಾರಿ ಘಾಟ್‌ಗೆ ತೆರಳಿ ಮಾತೆ ನರ್ಮದಾಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಪ್ರಿಯಾಂಕಾ ಅವರು ಹುತಾತ್ಮರ ಸ್ಮಾರಕಕ್ಕೆ ತಲುಪಲಿದ್ದಾರೆ, ಅಲ್ಲಿ ಅವರು ನವದೆಹಲಿಗೆ ತೆರಳುವ ಮೊದಲು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಇದಕ್ಕಾಗಿ ಹುರುಪಿನಿಂದ ತಯಾರಿ ನಡೆಸುತ್ತಿದೆ. ಈ ಸಮಾವೇಶದಲ್ಲಿ 1 ಲಕ್ಷ ಜನರನ್ನು ಸಜ್ಜುಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ.