ಬೆಂಗಳೂರು: ಪ್ರತಿದಿನ ಶತಕದ ಕೇಕೆ ಹಾಕುತ್ತಿರುವ ಕೊರೊನಾ ವೈರಸ್ ಇಂದು ಹೊಸದಾಗಿ 267 ಜನರಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಮತ್ತೊಬ್ಬರು ಕೊರೊನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ನಿನ್ನೆಯಷ್ಟೇ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಉಡುಪಿಯ ಜಾಗವನ್ನು ಇಂದು ಕಲಬುರಗಿ ಪಡೆದುಕೊಂಡಿದೆ. ಇಂದು ಒಂದೇ ದಿನ 105 ಸೋಂಕಿತರು ಕಲಬುರಗಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಒಟ್ಟು 510ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಲಬುರಗಿ ಮೊದಲ ಸ್ಥಾನ ಪಡೆದುಕೊಂಡಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆಯಾಗಿದ್ದು, 2,494 ಪ್ರಕರಣಗಳು ಸಕ್ರಿಯವಾಗಿವೆ. 16 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ 250 ಅಂತಾರಾಜ್ಯ ಪ್ರಯಾಣಿಕರಾಗಿದ್ದಾರೆ.
ಇಂದು 111 ಮಂದಿ ಡಿಸ್ಜಾರ್ಜ್ ಆಗಿದ್ದು, ಈವರೆಗೆ ಒಟ್ಟು 1,514 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ದಾವಣಗೆರೆಯ ರೋಗಿ-3861, 80 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದು, ಇವರು ರೋಗಿ-2415ರ ಸಂಪರ್ಕ ಹೊಂದಿದ್ದರು. ಮೇ 28ರಂದು ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಇಂದು ಪತ್ತೆಯಾಗಿರುವ ಸೋಂಕಿತರು ಮಹಾರಾಷ್ಟ್ರ, ನವದೆಹಲಿ, ತಮಿಳುನಾಡು, ರಾಜಸ್ಥಾನ ಹಾಗೂ ಬಿಹಾರದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ.