ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಸಾರಿಗೆ ಇಲಾಖೆಯನ್ನು ನಷ್ಟಕ್ಕೆ ದೂಡಿ ಈ ಮೂಲಕ ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ.
ಟ್ವೀಟ್ ಮೂಲಕ ಈ ಮಾಹಿತಿ ನೀಡಿರುವ ಕಾಂಗ್ರೆಸ್, ಒಂದೆಡೆ ಯುಗಾದಿ ಹಬ್ಬ ಹಾಗೂ ದೀರ್ಘ ರಜೆಗಳಿರುವ ಕಾರಣ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಮತ್ತೊಂದೆಡೆ ಲಾಕ್‌ಡೌನ್ ಆಗಬಹುದೆನ್ನುವ ಭೀತಿಯಲ್ಲಿ ವಲಸೆ ಕಾರ್ಮಿಕರು ಊರು ಸೇರಿಕೊಳ್ಳುವ ಧಾವಂತದಲ್ಲಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಲ್ಲಿ ದುಪ್ಪಟ್ಟು ದರ ಸುಲಿಗೆಗಿಳಿದಿದ್ದಾರೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಸಾರಿಗೆ ನೌಕರ ಸಮಸ್ಯೆಗಳನ್ನು ಬಗೆಹರಿಸದೆ ಬೇಕಂತಲೇ ಅವರನ್ನು ಇನ್ನಷ್ಟು ಶೋಷಿಸುತ್ತಾ, ದಬ್ಬಾಳಿಕೆ ನಡೆಸಿ ಹತಾಶರನ್ನಾಗಿಸುವ ಕೆಲಸ ಮಾಡುತ್ತಾ ಖಾಸಗೀಕರಣದ ತನ್ನ ಮೂಲ ಉದ್ದೇಶಕ್ಕೆ ವಾತಾವರಣ ಹದ ಮಾಡಿಕೊಳ್ಳುತ್ತಿದೆ. ನೌಕರರ ವೇತನ ಹೆಚ್ಚಿಸುವ ಅವಕಾಶಗಳಿವೆ. ಆದರೆ ಸರ್ಕಾರಕ್ಕೆ ನೌಕರರ ಹಿತ ಬೇಕಿಲ್ಲ ಎಂದು ದೂರಿದೆ.
ನೌಕರರು ಚೆನ್ನಾಗಿದ್ದರೆ ಸಾರಿಗೆ ಸಂಸ್ಥೆಗಳು ಚೆನ್ನಾಗಿರುತ್ತವೆ. ಆದರೆ ಈ ಸರ್ಕಾರಕ್ಕೆ ಸಾರಿಗೆ ಸಂಸ್ಥೆಗಳು ಚೆನ್ನಾಗಿರುವುದು ಬೇಕಿಲ್ಲ. ಸಂಸ್ಥೆಗಳು ಉತ್ತಮವಾಗಿದ್ದರೆ ಖಾಸಗೀಕರಣಕ್ಕೆ ಬೇರೆ ಸಬೂಬು ಸಿಗುವುದಿಲ್ಲ. ಹೀಗಾಗಿ ಸಾರಿಗೆ ನಿಗಮಗಳನ್ನು ಮುಳುಗಿಸುವ ಹುನ್ನಾರ ನಡೆಸಿದೆ ಬಿಜೆಪಿ ಸರ್ಕಾರ ಎಂದಿದೆ.
ಸೋಂಕು ಹೆಚ್ಚಳ:
ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿತನದಿಂದ ಕೊರೊನಾ ಸೋಂಕು ರಾಜ್ಯವನ್ನು ಶೋಚನೀಯ ಸ್ಥಿತಿಗೆ ಕೊಂಡೊಯ್ಯಲಿದೆ. ಸಮರ್ಪಕ ಐಸಿಯುಗಳಿಲ್ಲ, ವೆಂಟಿಲೇಟರ್‌ಗಳ ಕೊರತೆ, ಬೆಡ್‌ಗಳಿಲ್ಲದೆ ಪರದಾಟ, ಐಸೋಲೇಶನ್ ಕೇಂದ್ರಗಳಿಲ್ಲ, ಸಮರ್ಪಕ ಟೆಸ್ಟಿಂಗ್‌ಗಳು ನಡೆಯುತ್ತಿಲ್ಲ, ಸೋಂಕಿತರಿಗೆ ಚಿಕಿತ್ಸೆ ಸಿಗದೆ ಪರದಾಟ ಎದುರಾಗಿದೆ.
ಕೊರೊನಾ ಎದುರಿಸುವ, ಸೋಂಕಿತರನ್ನು ರಕ್ಷಿಸಲು ಯಾವುದೇ ಗಂಭೀರ ಚಿಂತನೆ ನಡೆಸಿ ಸಿದ್ಧತೆ ಮಾಡಿಕೊಳ್ಳದ ಈ ಮುಠ್ಠಾಳ ಸರ್ಕಾರ ರಾತ್ರಿ ಕರ್ಫ್ಯು ಕರೊನಾ ತಡೆಯುತ್ತದೆ ಎಂದು ನಂಬಿಕೊಂಡಿದೆ. ಸೋಂಕಿನ ಮೊದಲ ಅಲೆಯಿಂದ ಕಿಂಚಿತ್ತೂ ಪಾಠ ಕಲಿಯದೆ ರೋಗಿಗಳ ಬೆಡ್ಡಿನಲ್ಲಿ, ಬ್ರೆಡ್ಡಿನಲ್ಲಿ ಭ್ರಷ್ಟಾಚಾರ ನಡೆಸಿದ್ದೊಂದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಆರೋಪ ಮಾಡಿದೆ.