ದೇವನಹಳ್ಳಿ(ಬೆಂಗಳೂರು): ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಸಭೆ ಆಯೋಜಿಸಿದೆ. ಈ ಸಭೆಯಲ್ಲಿ ಭಾಗವಹಿಸಲು ಹಲವು ಸಚಿವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್, ಕೆ.ಎನ್.ರಾಜಣ್ಣ ಮತ್ತು ಆರ್.ಬಿ.ತಿಮ್ಮಾಪುರ ಬೆಳಿಗ್ಗೆ 07:30ರ ವಿಮಾನದಲ್ಲಿ ತೆರಳಿದರು.
ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಆರ್.ಬಿ.ತಿಮ್ಮಾಪುರ, "ಹೆಚ್ಚುವರಿ ಡಿಸಿಎಂ ಆಯ್ಕೆ ವಿಚಾರವಾಗಿ ಮಾತನಾಡುತ್ತಾ, "ಇದು ಹೈಕಮಾಂಡ್ಗೆ ಬಿಟ್ಟದ್ದು. ನಮ್ಮನ್ನು ಎಐಸಿಸಿ ಸಭೆಗೆ ಕರೆದಿದ್ದಾರೆ. ಅದಕ್ಕೆ ನಾನು ಹೋಗುತ್ತಿದ್ದೇನೆ" ಎಂದು ಹೇಳಿದರು.
ರಾಮಮಂದಿರ ವಿಚಾರವಾಗಿ, "ಹಿಂದೂ ಧರ್ಮ ಯಾರೊಬ್ಬರ ಆಸ್ತಿಯಲ್ಲ. ನಾವು ಆಂಜನೇಯ ದೇವಸ್ಥಾನದಿಂದ ಹೊರಗೆ ನಿಂತವರು. ದಲಿತರನ್ನು ದೇವಸ್ಥಾನದ ಒಳಗೆ ಕರೆಯುವುದಿಲ್ಲ. ದಲಿತರನ್ನು ದೇವಸ್ಥಾನದ ಒಳಗೆ ಕರೆಯುತ್ತಾರಾ?. ಹಿಂದೂ ಹಿಂದೂ ಎಂದು ಮಾತನಾಡುವವರು ಮೊದಲು ದಲಿತರ ಬಗ್ಗೆ ಮಾತನಾಡಲಿ" ಎಂದರು.
ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, "28 ಲೋಕಸಭಾ ಕ್ಷೇತ್ರದ ಉಸ್ತುವಾರಿ ಸಚಿವರ ಸಭೆ ಕರೆಯಲಾಗಿದೆ. ಎಲ್ಲಾ ಕ್ಷೇತ್ರದ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ನಾವು ಈಗಾಗಲೇ ಹಲವು ಸಲಹೆಗಳನ್ನು ನೀಡಿದ್ದೇವೆ. ಚುನಾವಣೆಗೂ ಮುನ್ನ ಡಿಸಿಎಂ ಮಾಡಿದ್ರೆ ಒಳ್ಳೆಯದಾಗುತ್ತದೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ದ" ಎಂದು ತಿಳಿಸಿದರು.
"ಎಲ್ಲಾ ಊರುಗಳಲ್ಲೂ ಸಾವಿರಾರು ವರ್ಷಗಳ ಇತಿಹಾಸ ಇರುವ ರಾಮನ ದೇವಸ್ಥಾನಗಳಿವೆ. ರಾಮನ ಜನ್ಮಭೂಮಿಯಲ್ಲೇ ದೇವಾಲಯ ನಿರ್ಮಾಣವಾಗಿರುವುದು ಇದರ ವಿಶೇಷತೆ. ನಮ್ಮ ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ಹೇಳಿದ್ದಾರೆ. ನಾವು ಈ ಹಿಂದೆ ರಾಮಲಲ್ಲಾನ ಟೆಂಟ್ನಲ್ಲಿ ಕೂರಿಸಿದಾಗ ಹೋಗಿ ಬಂದಿದ್ದೀವಿ. ಮುಂದೆನೂ ಹೋಗ್ತೀವಿ, ಅದು ವೈಯುಕ್ತಿಕ ವಿಚಾರ" ಎಂದರು.
ಸಚಿವರಾದ ಎನ್.ಎಸ್.ಬೋಸರಾಜ್, ಕೆ.ಜೆ.ಜಾರ್ಜ್ ಹಾಗೂ ಸಂತೋಷ್ ಲಾಡ್ ಅವರು 9 ಗಂಟೆಯ ವಿಸ್ತಾರ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದರು. ಈ ವೇಳೆ ಮಾತನಾಡಿದ ಬೋಸರಾಜ್, "ಲೋಕಸಭೆ ಚುನಾವಣೆ ಸಂಬಂಧ ಜಿಲ್ಲಾ ಉಸ್ತುವಾರಿಗಳ ಸಭೆ ಕರೆದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದೇವೆ. ಚುನಾವಣಾ ತಂತ್ರಗಳ ಬಗ್ಗೆಯೂ ಚರ್ಚೆ ನಡೆಯಲಿದೆ" ಎಂದು ಹೇಳಿದರು.
ಸಚಿವ ಕೆ.ಹೆಚ್.ಮುನಿಯಪ್ಪ ದೆಹಲಿಗೆ ಪ್ರಯಾಣ ಬೆಳೆಸಿದರು. ಇದಕ್ಕೂ ಮುನ್ನ ಮಾತನಾಡಿದ ಅವರು, "ಸುರ್ಜೆವಾಲಾ ಅವರು ನಮಗೆ ಅತ್ಯುತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಮನೆ ಮನೆ ಪ್ರಚಾರಕ್ಕೆ ಸೂಚಿಸಿದ್ದಾರೆ. ನಿಗಮ, ಮಂಡಳಿಗಳನ್ನು ಕಾರ್ಯಕರ್ತರಿಗೆ ಮುಖಂಡರಿಗೆ ಸಮವಾಗಿ ಹಂಚಲಾಗುತ್ತದೆ" ಎಂದರು.
"ರಾಜ್ಯದಲ್ಲಿ ಎಲ್ಲಾ 28 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ, ಹೈಕಮಾಂಡ್ ಹೇಳಿದರೆ ಅದಕ್ಕೆ ನಾನು ಬದ್ಧ" ಎಂದರು.
ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಚರ್ಚೆಯಾಗಿಲ್ಲ: ಎಸ್.ಎಲ್.ಭೋಜೇಗೌಡ