ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಇದೀಗ ಪಕ್ಷ ಬಿಡುವವರಿಂದ ರಾಜ್ಯ ನಾಯಕರಿಗೆ ಹೊಸದೊಂದು ತಲೆಬಿಸಿ ಆರಂಭವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ 2023 ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂಬ ಮಾತು ಹೆಚ್ಚಿನ ನಾಗರಿಕರ ಬಾಯಿಂದ ಕೇಳಿ ಬರುತ್ತಿದ್ದರೂ ಸಹ, ಬಿಜೆಪಿ ನಾಯಕರ ಆಮಿಷ ಹಾಗೂ ತಂತ್ರಗಾರಿಕೆಗೆ ಸಾಕಷ್ಟು ಕಾಂಗ್ರೆಸ್ ನಾಯಕರು ಮರುಳಾಗುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವವನ್ನು ಪ್ರಶ್ನಿಸಿ ಹಲವು ಹಿರಿಯ ಕಾಂಗ್ರೆಸ್ಸಿಗರು ಪಕ್ಷ ಬಿಟ್ಟು ಹೊರ ನಡೆಯುತ್ತಿದ್ದಾರೆ.
ರಾಜ್ಯದಲ್ಲಿ ಸಹ ಈ ಒಂದು ಬದಲಾವಣೆಯ ಪ್ರಭಾವ ಸಹ ಕೊಂಚಮಟ್ಟಿಗೆ ಪರಿಣಾಮ ಬೀರುತ್ತಿದೆ. ಆದರೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಪಕ್ಷ ಬಿಡಲು ಮುಂದಾಗಿರುವ ವಿಚಾರದಲ್ಲಿ ಸ್ಥಳೀಯರ ಅಸಮಾಧಾನ, ಜವಾಬ್ದಾರಿ ಹಂಚಿಕೆಯಲ್ಲಿ ಆಗಿರುವ ವ್ಯತ್ಯಯ, ಜಿಲ್ಲಾ ಮಟ್ಟದಲ್ಲಿ ತಮ್ಮನ್ನು ಪರಿಗಣಿಸದೆ ಬೇರೆ ನಾಯಕರಿಗೆ ಮಣೆ ಹಾಕುತ್ತಿರುವುದು ಮತ್ತು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದು. ಇದೆಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಅಧಿಕಾರ ಸಿಗುತ್ತಿಲ್ಲ ಎಂಬ ಬೇಸರದಿಂದ ಪಕ್ಷ ಬಿಡಲು ಮುಂದಾಗಿರುವವರೇ ಹೆಚ್ಚಾಗಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಬಿಟ್ಟು ಹೋಗುವ ಕಾಂಗ್ರೆಸ್ ನಾಯಕರನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಮಾಜಿ ಸಂಸದ ಮುದ್ದಹನುಮೇಗೌಡ ಪಕ್ಷ ಬಿಟ್ಟು ತೆರಳಿದ್ದಾರೆ. ಇದೀಗ ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಸಚಿವ ಎಂಆರ್ ಸೀತಾರಾಮ್ ಮತ್ತಿತರ ಕಾಂಗ್ರೆಸ್ ನಾಯಕರು ಪಕ್ಷ ಬಿಡುವ ನಿಟ್ಟಿನಲ್ಲಿ ಬಲವಾದ ಚಿಂತನೆ ನಡೆಸಿದ್ದು, ಇವರನ್ನು ತಡೆಯಲು ಕಾಂಗ್ರೆಸ್ ನಾಯಕರು ನಡೆಸಿರುವ ಪ್ರಯತ್ನ ನಿರೀಕ್ಷಿತ ಫಲ ಕಾಣುತ್ತಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರವಲ್ಲದೆ, ರಾಷ್ಟ್ರೀಯ ನಾಯಕ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಸಹ ಕಾಂಗ್ರೆಸ್ ನಾಯಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದಾರೆ.
ಡಿಕೆಶಿ ಕ್ರಮದ ಎಚ್ಚರಿಕೆ.. ಕಾಂಗ್ರೆಸ್ ನಾಯಕರು ಪಕ್ಷ ಬಿಡುವುದನ್ನು ತಡೆಯುವುದೇ ಇದೀಗ ರಾಜ್ಯನಾಯಕರಿಗೆ ದೊಡ್ಡ ಸವಾಲಾಗಿದ್ದು, ಚುನಾವಣೆಗೆ ಒಂದು ವರ್ಷ ಕಾಲ ಮಿತಿ ಇರುವ ಸಂದರ್ಭದಲ್ಲಿ ಸಂಘಟನೆಗೆ ಹೊತ್ತು ಕೊಡುವ ಜೊತೆಗೆ ಬಿಟ್ಟು ಹೋಗುವರನ್ನು ಉಳಿಸಿಕೊಳ್ಳುವುದು ಸಹ ದೊಡ್ಡ ಸವಾಲಾಗಿ ಕಾಡಿದೆ. ಈಗಾಗಲೇ ಪಕ್ಷ ಬಿಟ್ಟು ಹೋಗುವವರು ಮತ್ತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಯಾರೇ ಪಕ್ಷದ ವಿರುದ್ಧ ನಡೆದುಕೊಂಡರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಮಾತನ್ನು ಆಡಿದ್ದಾರೆ. ಆದರೆ ಬಿಜೆಪಿಯ ಆಮಿಷ ಹಾಗೂ ಕಾಂಗ್ರೆಸ್ ಪಕ್ಷದ ಮೇಲಿನ ಮುನಿಸು ಪಕ್ಷ ಬಿಡುವವರನ್ನು ತಡೆಯುತ್ತದಾ ಎನ್ನುವುದನ್ನು ಕಾದು ನೋಡಬೇಕಿದೆ.
ಬಿಜೆಪಿ ಹಿಂದುತ್ವದ ಅಜೆಂಡಾ.. ಉಡುಪಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ತನ್ನ ಹಿಂದುತ್ವದ ಅಜೆಂಡಾ ಮೇಲೆ ಪ್ರಭಾವ ಬೀರುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಪ್ರಚಾರ ಕಣಕ್ಕಿಳಿಸಿ ಲಿಂಗಾಯತ ಸಮುದಾಯದ ಪ್ರಬಲ ಮತ ಬ್ಯಾಂಕ್ ಅನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಹಳೆ ಮೈಸೂರು ಭಾಗದ ಮೈಸೂರು ಮಂಡ್ಯ ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಹಂತ ಹಂತವಾಗಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. 2023 ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಇನ್ನಷ್ಟು ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಜೊತೆಗೆ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿಯೂ ತನ್ನ ವ್ಯಾಪ್ತಿ ಪ್ರದೇಶ ವಿಸ್ತರಿಸಿಕೊಳ್ಳುವ ಸಿದ್ಧತೆಯಲ್ಲಿ ಬಿಜೆಪಿ ಇದೆ.
ಈ ವಿಚಾರ ಸಹ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವನ್ನು ಉಂಟು ಮಾಡಿದ್ದು, ಈ ಎಲ್ಲ ಜಿಲ್ಲೆಗಳಲ್ಲೂ ಪಕ್ಷ ಬಿಡುವ ಹಾಲಿ ಮಾಜಿ ಶಾಸಕರನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಿರಂತರವಾಗಿ ತಲೆಕೆಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ನ ಒಂದಿಷ್ಟು ಆಂತರಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಷ್ಟಾಗಿ ಪ್ರಯತ್ನ ನಡೆಯುತ್ತಿಲ್ಲ. ಈ ಮಧ್ಯ ಕಾಂಗ್ರೆಸ್ ಬಿಡುವವರ ಸಂಖ್ಯೆಯು ಹೆಚ್ಚುತ್ತಿರುವುದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ಗೆ ತಲೆಬಿಸಿಯಾಗಿ ಕಾಡಿದೆ.
ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರು ವಿಶ್ವಾಸ.. ಮೈಸೂರು ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಾ ಎಚ್ಸಿ ಮಹದೇವಪ್ಪ ಪ್ರಕಾರ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಬಿಜೆಪಿಯ ದುರಾಡಳಿತ ಹಾಗೂ 40% ಭ್ರಷ್ಟಾಚಾರವನ್ನು ಜನ ಕಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಸರ್ಕಾರದ ವಿರೋಧಿ ಅಲೆ ಇದ್ದು ಇದರ ಜೊತೆ ಈ ಹಿಂದೆ ಕಾಂಗ್ರೆಸ್ ಪಕ್ಷ ಕೊಟ್ಟ ಕಲ್ಯಾಣ ಕಾರ್ಯಕ್ರಮಗಳ ನೆನಪು ಜನರಿಗೆ ಇದೆ. ಈ ಹಿನ್ನೆಲೆ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮಾತ್ರವಲ್ಲದೆ 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿಯೂ ಹೆಚ್ಚಿನ ಸಂಸದರನ್ನ ಇಲ್ಲಿನ ಜನ ಆಯ್ಕೆ ಮಾಡಿ ಕಳಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಓದಿ: ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ ಮತ್ತೆ ಅಧಿಕಾರಕ್ಕೆ ಬರಲ್ಲ: ಬಿಎಸ್ವೈ