ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿ ಯೋಜನೆಗಳ ಕೇಂದ್ರೀಕೃತ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ನಿರ್ಗಮಿತ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಅನ್ನು ಅಲ್ಪ ಪರಿಷ್ಕೃರಣೆಯೊಂದಿಗೆ ಸಿಎಂ ಸಿದ್ದರಾಮಯ್ಯ ಅಂದಾಜು 3.25 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಜುಲೈ 7ಕ್ಕೆ ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಈಗಾಗಾಲೇ ನಿರ್ಗಮಿತ ಬಿಜೆಪಿ ಸರ್ಕಾರ 2023-24 ಸಾಲಿನ ಬಜೆಟ್ ಮಂಡಿಸಿದೆ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾರಣ ಮತ್ತೆ ಪೂರ್ಣಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ಹೊಸ ಕಾಂಗ್ರೆಸ್ ಸರ್ಕಾರದ ಬಜೆಟ್ ಪಂಚ ಗ್ಯಾರಂಟಿ ಯೋಜನೆಗಳ ಕೇಂದ್ರೀಕೃತವಾಗಿರಲಿದೆ. ಬಜೆಟ್ನಲ್ಲಿ ಪಂಚ ಗ್ಯಾರಂಟಿಗಳಿಗಾಗಿನ ಲೆಕ್ಕಾಚಾರವೇ ಪ್ರಮುಖ ಆದ್ಯತೆಯಾಗಿರಲಿದೆ.
ಹೊಸ ಬಜೆಟ್ ಬೊಮ್ಮಾಯಿ ಮಂಡಿಸಿದ್ದ ಹಳೆ ಬಜೆಟ್ನ ಅನುದಾನದ ಮರು ಹೊಂದಾಣಿಕೆಗಷ್ಟೇ ಸೀಮಿತವಾಗಿರಲಿದೆ ಇರಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಹೊಸ ಸರ್ಕಾರದ ಯೋಜನೆಗಳಿಗೆ ಅನುದಾನದ ಮರುಹಂಚಿಕೆ ಬಜೆಟ್ನಲ್ಲಿ ಇರಲಿದೆ. ಉಳಿದ ಹಾಗೆ ಪಂಚ ಗ್ಯಾರಂಟಿಗಳಿಗೆ ಬಹುತೇಕ ಬಜೆಟ್ ಅನುದಾನ ಮೀಸಲಿರಲಿದೆ ಎಂದು ಹೇಳಲಾಗಿದೆ. ಸುಮಾರು ಶೇ 15 ರಷ್ಟು ಬಜೆಟ್ ಹಣವನ್ನು ಪಂಚ ಯೋಜನೆಗಳಿಗೆ ಮೀಸಲಿರಿಸುವ ಲೆಕ್ಕಾಚಾರ ನಡೆಯುತ್ತಿದೆ.
3.25 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ?: ಸಿಎಂ ಸಿದ್ದರಾಮಯ್ಯ 2023-24 ಸಾಲಿನ ಹೊಸ ಬಜೆಟ್ ಮಂಡನೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಅಂದಾಜು 3.25 ಲಕ್ಷ ಕೋಟಿ ಗಾತ್ರದ ಹೊಸ ಬಜೆಟ್ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಉಳಿತಾಯದ ಬಜೆಟ್ ಮಂಡನೆ ಕಷ್ಟ ಸಾಧ್ಯ ಎನ್ನಲಾಗುತ್ತಿದೆ.
ನಿರ್ಗಮಿತ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಫೆಬ್ರವರಿಯಲ್ಲಿ 3,09,182 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಆ ಮೂಲಕ 402 ಕೋಟಿ ರೂ. ಅಲ್ಪ ಉಳಿತಾಯದ ಬಜೆಟ್ ಮಂಡನೆ ಮಾಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮತ್ತೆ ಹೊಸ ಬಜೆಟ್ ಮಂಡಿಸಲಿದೆ. ಸಿಎಂ ಸಿದ್ದರಾಮಯ್ಯ 3.25 ಲಕ್ಷ ಕೋಟಿ ಗಾತ್ರದ ಹೊಸ ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಂದರೆ, ಬೊಮ್ಮಾಯಿ ಮಂಡಿಸಿದ ಬಜೆಟ್ಗಿಂತ ಅಂದಾಜು 15,000 ಕೋಟಿ ರೂ. ಹೆಚ್ಚುವರಿ ಗಾತ್ರದ ಬಜೆಟ್ ಮಂಡಿಸಲು ಲೆಕ್ಕಾಚಾರ ನಡೆಸುತ್ತಿದ್ದಾರೆ. ಆದರೆ, ಈ ಬಾರಿ ಆದಾಯ ಕೊರತೆಯ ಬಜೆಟ್ ಮಂಡನೆಯಾಗಲಿದೆಯೋ ಅಥವಾ ಉಳಿತಾಯದ ಬಜೆಟ್ ಮಂಡನೆಯಾಗಲಿದೆಯೋ ಎಂಬ ಕುತೂಹಲ ಮೂಡಿದೆ. ಪಂಚ ಗ್ಯಾರಂಟಿಗಳ ಹೊರೆ ಹಿನ್ನೆಲೆ ಬಹುತೇಕ ಕೊರತೆ ಬಜೆಟ್ ಮಂಡನೆ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಪಂಚ ಗ್ಯಾರಂಟಿಗಳಿಗೆ ಆದಾಯದ ಸಂಗ್ರಹದ ಕಸರತ್ತು: ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಲೆಕ್ಕಾಚಾರದಲ್ಲೇ ತೊಡಗಿದ್ದಾರೆ. ಇದಕ್ಕಾಗಿ ಆದಾಯ ಮೂಲ ಹೆಚ್ಚಿಸುವತ್ತ ಅಧಿಕಾರಿಗಳಿಗೆ ಗುರಿ ನೀಡಿದ್ದಾರೆ.
ಇಲಾಖಾವಾರು ಪೂರ್ವಭಾವಿ ಸಭೆಗಳಲ್ಲಿ ಪ್ರಮುಖವಾಗಿ ಅನಗತ್ಯ ವೆಚ್ಚ ಕಡಿತ, ಆದಾಯ ಸಂಗ್ರಹ ಹೆಚ್ಚಿಗೆ ಮೂಲಕ ಸುಮಾರು 40,000- 50,000 ಕೋಟಿ ರೂ. ಹೆಚ್ಚುವರಿ ಹಣ ಕ್ರೋಢೀಕರಿಸಲು ಗಂಭೀರ ಚರ್ಚೆ ನಡೆಸಿದ್ದಾರೆ. ಬಹುತೇಕ ಎಲ್ಲ ತೆರಿಗೆ ಸಂಗ್ರಹ ಇಲಾಖೆಗಳಿಗೆ ಹೆಚ್ಚಿನ ಆದಾಯ ಸಂಗ್ರಹದ ಗುರಿ ನೀಡಲಾಗಿದೆ. ವಾಣಿಜ್ಯ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಹಾಗೂ ಮುದ್ರಾಂಕ ಇಲಾಖೆ, ತೆರಿಗೆಯೇತರ ಮೂಲಗಳಿಗೆ ಹೆಚ್ಚಿನ ಆದಾಯ ಸಂಗ್ರಹದ ಗುರಿಯನ್ನು ಸಿಎಂ ಅಧಿಕಾರಿಗಳಿಗೆ ನೀಡಿದ್ದಾರೆ.
ಹೆಚ್ಚು ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಎಸ್ ಟಿ ಒಳಗೊಂಡ ವಾಣಿಜ್ಯ ತೆರಿಗೆ ಮೂಲಕ ಸುಮಾರು 1 ಲಕ್ಷ ಕೋಟಿಗೂ ಮೀರಿ ಆದಾಯ ಸಂಗ್ರಹದ ಗುರಿಯನ್ನು ನಿಗದಿ ಪಡಿಸುವ ಟಾರ್ಗೆಟ್ ನೀಡಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಅಬಕಾರಿ ಇಲಾಖೆಯತ್ತ ಸಿಎಂ ಸಿದ್ದರಾಮಯ್ಯ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಬೊಮ್ಮಾಯಿ ಸರ್ಕಾರ ತಮ್ಮ ಬಜೆಟ್ನಲ್ಲಿ ಅಬಕಾರಿ ತೆರಿಗೆ ಮೂಲಕ 2023-24 ಸಾಲಿನಲ್ಲಿ 35,000 ಕೋಟಿ ರೂ.ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಇದೀಗ ಅಬಕಾರಿ ಇಲಾಖೆಯ ರಾಜಸ್ವ ಸಂಗ್ರಹದ ಗುರಿಯನ್ನು 38,000 ಕೋಟಿ ರೂ.ಗೆ ನಿಗದಿ ಪಡಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಮೇಲಿನ ತೆರಿಗೆ ಹೆಚ್ಚಿಸಿ ಈ ಗುರಿ ಮುಟ್ಟಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ನೋಂದಣಿ ಹಾಗೂ ಮುದ್ರಾಂಕ ಶುಲ್ಕದ ಮೇಲೂ ಸಿಎಂ ಸಿದ್ದರಾಮಯ್ಯ ಕಣ್ಣಿಟ್ಟಿದ್ದಾರೆ. ಬೊಮ್ಮಾಯಿ ಸರ್ಕಾರ ತಮ್ಮ ಕೊನೆಯ ಲೇಖಾನುದಾನಲ್ಲಿ 19,000 ಗುರಿ ನೀಡಿತ್ತು. ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ಆಸ್ತಿ ಮಾರ್ಗಸೂಚಿ ದರವನ್ನು 10-15% ಹೆಚ್ಚಿಸುವ ಮೂಲಕ ನೋಂದಣಿ ಹಾಗೂ ಮುದ್ರಾಂಕ ಶುಲ್ಕದ ಮೂಲಕ ಅಂದಾಜು ಗರಿಷ್ಠ 25,000 ಕೋಟಿ ರೂ. ಸಂಗ್ರಹಿಸುವ ಗುರಿ ನೀಡಿದೆ.
ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಸ್ವ ಗುರಿಯನ್ನು ಹೆಚ್ಚಳ ಮಾಡಲು ಸಿಎಂ ಸೂಚಿಸಿದ್ದಾರೆ. ಹೆಚ್ಚು ಖನಿಜ ಬ್ಕಾಕ್ಗಳನ್ನು ಹರಾಜು ಹಾಕಿ, ರಾಯಲ್ಟಿ ಸಂಗ್ರಹ ಹೆಚ್ಚಿಸಿ ಅಂದಾಜು 11,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ನೀಡಿದೆ. ಆ ಮೂಲಕ ಸ್ವಂತ ತೆರಿಗೆ ಹಾಗೂ ತೆರಿಗೆಯೇತರ ಮೂಲಗಳಿಂದ ಹೆಚ್ಚಿನ ಆದಾಯ ಸಂಗ್ರಹದ ಗುರಿ ನೀಡಿದ್ದು, ಪಂಚ ಗ್ಯಾರಂಟಿ ಹೊರೆ ನೀಗಿಸುವ ಲೆಕ್ಕಾಚಾರ ಮಾಡುತ್ತಿದೆ.
ಇದನ್ನೂ ಓದಿ: ನಾಳೆಯಿಂದ 3 ದಿನ ನೂತನ ಶಾಸಕರಿಗೆ ತರಬೇತಿ ಶಿಬಿರ.. ಇಂದು ಸಿಎಂ ಸಿದ್ದರಾಮಯ್ಯರಿಂದ ಕಾರ್ಯಕ್ರಮ ಉದ್ಘಾಟನೆ