ಬೆಂಗಳೂರು: ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ,ತಮಿಳುನಾಡಿನಲ್ಲಿ ಇಂದಿನಿಂದ ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸತ್ಯಾಗ್ರಹ ಆರಂಭಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಸತ್ಯಾಗ್ರಹಕ್ಕೆ ಐ ಡೋಂಟ್ ಕೇರ್ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ, ನೋಡಿ, ಅಣ್ಣಾಮಲೈಗೆ ನಾನು ಈಗಾಗಲೇ ಉತ್ತರ ನೀಡಿದ್ದೇನೆ. ಆತ ದೊಡ್ಡ ಮನುಷ್ಯ. ಸತ್ಯಾಗ್ರಹ ಮಾಡುವ ಅವಶ್ಯಕತೆ ಇಲ್ಲ. ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆ ಬಗ್ಗೆ ಯಾರೇ ಪ್ರತಿಭಟನೆ ಮಾಡಲಿ, ಅವರು ಯಾವುದೇ ಪಕ್ಷದಲ್ಲಿರಲಿ ಅದು ರಾಜಕೀಯ ಪ್ರೇರಿತವಾಗಿದೆ.
ಮೇಕೆದಾಟು ಯೋಜನೆ ಅಂತಾರಾಜ್ಯ ವಿವಾದವಾಗಿದ್ದು, ಈಗಾಗಲೇ ಸಮಸ್ಯೆ ಬಗೆಹರಿದಿದೆ. ಹೆಚ್ಚುವರಿ ನೀರು ತಡೆಹಿಡಿದು ಬೆಂಗಳೂರಿಗೆ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇದಕ್ಕೆ ಯಾರೇ ಪ್ರತಿಭಟನೆ ಮಾಡಿದ್ರೂ ನಾನು ಕೇರ್ ಮಾಡಲ್ಲ. ಕೇಂದ್ರದಿಂದ ಒಪ್ಪಿಗೆ ಪಡೆದು ಯೋಜನೆ ಆರಂಭ ಮಾಡಲಾಗುವುದು ಎಂದರು. ಕೇಂದ್ರ ಜಲಶಕ್ತಿ ಸಚಿವರಾಗಿರುವ ಶೇಖಾವತ್ ಜೊತೆ ನಾನು ಈಗಾಗಲೇ ಈ ಯೋಜನೆ ಬಗ್ಗೆ ಮಾತನಾಡಿದ್ದೇನೆ. ಕಾನೂನಾತ್ಮಕವಾಗಿ ಅನುಮೋದನೆ ಸಿಗುತ್ತಿದ್ದಂತೆ ಯೋಜನೆ ಪ್ರಾರಂಭ ಮಾಡುತ್ತೇವೆ. ಇದಕ್ಕೆ ಯಾವುದೇ ವ್ಯಕ್ತಿ ಪ್ರತಿಭಟನೆ ಅಥವಾ ಸತ್ಯಾಗ್ರಹ ನಡೆಸಲಿ ಎಂದು ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಇಂದಿನಿಂದ ಸತ್ಯಾಗ್ರಹ ಆರಂಭ ಮಾಡಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ನಾವು ಅನುಮತಿ ನೀಡಲ್ಲ ಎಂದು ಹೇಳಿದ್ದಾರೆ.