ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆಯ ಕಾವು ಬೇಸಿಗೆ ಬಿರು ಬಿಸಿಲಿಗಿಂತಲೂ ಹೆಚ್ಚಾಗಿದೆ.
ಬೆಂಗಳೂರು ವ್ಯಾಪ್ತಿಯ ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ಯಶವಂತಪುರ, ಶಿವಾಜಿನಗರ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆಯ ಅಬ್ಬರ ಜೋರಾಗಿದೆ. ಯಶವಂತಪುರ, ಕೆಆರ್ ಪುರಂ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಅನರ್ಹ ಶಾಸಕರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಈ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಬಿಜೆಪಿ ನಾಯಕರು ಪಣತೊಟ್ಟಿದ್ದು, ಮೂರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರದ ಕೈಗೊಂಡಿದ್ದಾರೆ.
ಅಲ್ಲದೆ ಮೈತ್ರಿ ಸರ್ಕಾರ ಬೀಳಲು ಕಾರಣರಾದ ಅಭ್ಯರ್ಥಿಗಳನ್ನು ಸೋಲಿಸಿ ತಮ್ಮ ರೋಷವನ್ನು ತೀರಿಸಿಕೊಳ್ಳಬೇಕೆಂದು ಜೆಡಿಎಸ್-ಕಾಂಗ್ರೆಸ್ ನಾಯಕರು ಸಹ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ ಆರಂಭಿಸಿದ್ದಾರೆ. ಮೂರು ಪಕ್ಷದ ಅಗ್ರಮಾನ್ಯ ನಾಯಕರುಗಳೇ ಮೂರು ಕ್ಷೇತ್ರಗಳಲ್ಲಿ ಅಖಾಡಕ್ಕೆ ಧುಮುಕಿದ್ದು ಗಮನಸೆಳೆದಿದೆ. ಆದರೆ ಶಿವಾಜಿ ನಗರ ಕ್ಷೇತ್ರದ ಚಿತ್ರಣವೇ ಬೇರೆ ಇದೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಶಿವಾಜಿನಗರ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ರಿಜ್ವಾನ್ ಅರ್ಷದ್, ಜೆಡಿಎಸ್ನಿಂದ ತನ್ವೀರ್ ಅಹಮದ್ ವುಲ್ಲಾ, ಬಿಜೆಪಿಯಿಂದ ಎಂ.ಶರವಣ ಸ್ಪರ್ಧಿಸಿದ್ದು, ಅನರ್ಹ ಶಾಸಕ ರೋಷನ್ ಬೇಗ್ ಚುನಾವಣೆಯಿಂದ ದೂರ ಉಳಿದಿದ್ದಾರೆ.
ಶಿವಾಜಿನಗರ ಕ್ಷೇತ್ರದಲ್ಲಿ 3 ಪಕ್ಷಗಳ ಪ್ರಮುಖ ಅಗ್ರಮಾನ್ಯ ನಾಯಕರುಗಳು ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಎಂಟ್ರಿ ಕೊಟ್ಟಿಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಹೋಲಿಸಿದರೆ ಬಿಜೆಪಿ ಅಭ್ಯರ್ಥಿ ಬಿರುಸಿನ ಮತ ಪ್ರಚಾರ ಮಾಡುತ್ತಿದ್ದು, ನಿನ್ನೆ ಸಿಎಂ ಯಡಿಯೂರಪ್ಪ ಹಾಗೂ ಸಂಸದ ಪಿ.ಸಿ.ಮೋಹನ್ ಹೊರತುಪಡಿಸಿ ಬೇರೆ ಯಾವುದೇ ಹಿರಿಯ ನಾಯಕರು ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇನ್ನೂ ಬಂದಿಲ್ಲ. ತಮ್ಮ ಬೆಂಬಲಿಗರನ್ನು ಕಟ್ಟಿಕೊಂಡು ಎಂ.ಶರವಣ ಏಕಾಂಗಿಯಾಗಿ ಮತಯಾಚನೆ ಮಾಡ್ತಿದ್ದಾರೆ.
ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ ಇದುವರೆಗೂ ಕಾಂಗ್ರೆಸ್ಸಿನ ಯಾವುದೇ ಹಿರಿಯ ನಾಯಕರು ರಿಜ್ವಾನ್ ಅರ್ಷದ್ ಪರ ಮತಯಾಚನೆಗೆ ಶಿವಾಜಿನಗರದ ಕಡೆ ಸುಳಿಯಲೇ ಇಲ್ಲ. ಶಿವಾಜಿನಗರ ಕ್ಷೇತ್ರದ ಚುನಾವಣೆ ಉಸ್ತುವಾರಿಯಾದ ಬಿ.ಕೆ.ಹರಿಪ್ರಸಾದ್ ಈ ಕಡೆ ಇಣುಕಿಯೂ ನೋಡಿಲ್ಲ. ಅಲ್ಲದೇ ಮುಸ್ಲಿಂ ನಾಯಕರಾದ ಜಮೀರ್ ಅಹಮದ್, ಸಿ.ಎಂ.ಇಬ್ರಾಹಿಂ ಸಹ ಪ್ರಚಾರಕ್ಕೆ ಗೈರಾಗಿದ್ದು ಏಕಾಂಗಿಯಾಗಿಯೇ ರಿಜ್ವಾನ್ ಅರ್ಷದ್ ಮತಬೇಟೆ ಆರಂಭಿಸಿದ್ದಾರೆ.
ಶಿವಾಜಿನಗರದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿರುವ ಕಾರಣ ಸ್ಟಾರ್ ಪ್ರಚಾರಕರಾಗಿ ಸಿ.ಎಂ.ಇಬ್ರಾಹಿಂ ಅವರನ್ನು ನೇಮಿಸಿದ್ದರೂ ಸಹ ಸದ್ದಿಲ್ಲದೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ತಮಗೂ ಶಿವಾಜಿನಗರ ಚುನಾವಣೆಗೂ ಸಂಬಂಧವೇ ಇಲ್ಲದ ರೀತಿ ಇದ್ದಾರೆ. ಇದರ ಜೊತೆ ಅಹಿಂದ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಪರ ಪ್ರಚಾರಕ್ಕೆ ಬರಬಹುದು ಎಂದುಕೊಂಡಿದ್ದ ರಿಜ್ವಾನ್‌ಗೆ ನಿರಾಸೆಯಾಗಿದ್ದು, ಅನರ್ಹ ಶಾಸಕರನ್ನು ಸೋಲಿಸಲೇಬೇಕು ಎಂಬ ಜಿದ್ದಿಗೆ ಬಿದ್ದವರಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನರ್ಹ ಶಾಸಕರು ನಿಂತಿರುವ ಕ್ಷೇತ್ರಗಳ ಕಡೆ ಗಮನ ಕೊಟ್ಟಿದ್ದು ಶಿವಾಜಿನಗರ ಕಡೆಗಣಿಸಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಜೆಡಿಎಸ್ ಅಭ್ಯರ್ಥಿ ಸಹ ಸ್ಟಾರ್ ಪ್ರಚಾರಕರಿಲ್ಲದೆ ಏಕಾಂಗಿಯಾಗಿಯೇ ಕಳೆದೊಂದು ವಾರದಿಂದ ಮನೆ ಮನೆಗೂ ತೆರಳಿ ಮತಯಾಚನೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ನಾಮಪತ್ರ ಸಲ್ಲಿಸುವ ದಿನ ರೋಡ್ ಶೋಗೆ ಚಾಲನೆ ಕೊಡಲು ಬಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇದುವರೆಗೂ ಮತಯಾಚನೆಗೆ ಬಂದಿಲ್ಲ. ನನ್ನ ಪರ ಪ್ರಚಾರಕ್ಕೆ ದೊಡ್ಡಗೌಡರು, ಕುಮಾರಸ್ವಾಮಿ ಬರುತ್ತಾರೆ ಎಂದು ಹೇಳಿದ್ರು.
ಆದರೆ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮತ ಪ್ರಚಾರದ ಲಿಸ್ಟ್ನಲ್ಲಿ ಶಿವಾಜಿನಗರ ಇಲ್ಲವೆಂಬುದು ಗಮನಿಸಬೇಕಾದ ಅಂಶ. ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮದ್ ವುಲ್ಲಾ ಪರ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯರಾದ ಶರವಣ ಹೊರತುಪಡಿಸಿ ಮತ್ಯಾವ ನಾಯಕರು ಶಿವಾಜಿನಗರದ ಕಡೆ ತಲೆಯೂ ಹಾಕಿಲ್ಲ.
ಶಿವಾಜಿನಗರ ಚುನಾವಣೆಯು ಮೂರು ಪಕ್ಷದ ಹಿರಿಯ ನಾಯಕರಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಏಕಾಂಗಿಯಾಗಿಯೇ ಪ್ರಚಾರ ಮಾಡುತ್ತಿದ್ದಾರೆ.