ಬೆಂಗಳೂರು: ನಾಳೆ ಕರ್ನಾಟಕ ಬಂದ್ಗೆ ರೈತ ಸಂಘಟನೆಗಳು ಕರೆ ನೀಡಿದ್ದು, ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಎಲ್ಲಾ ಐಜಿಪಿ, ನಗರ ಪೊಲೀಸ್ ಆಯುಕ್ತ, ಹೆಚ್ವುವರಿ ಪೊಲೀಸ್ ಆಯುಕ್ತ, ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ಇಬ್ಬರು ಹೆಚ್ಚುವರಿ ಆಯುಕ್ತರು, 10 ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, 60 ಎಸಿಪಿಗಳು, 140 ಇನ್ಸ್ಪೆಕ್ಟರ್ಗಳು, 300ಕ್ಕೂ ಹೆಚ್ಚು ಪಿಎಸ್ಐಗಳು, 1500ಕ್ಕೂ ಹೆಚ್ಚು ಸಿವಿಲ್ ಹಾಗೂ ಸಂಚಾರಿ ಪೊಲೀಸರು, ಎರಡು ಸಾವಿರಕ್ಕೂ ಹೆಚ್ಚು ಕೆಎಸ್ಆರ್ಪಿ ಹಾಗೂ ಸಿಎಆರ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ತುಮಕೂರು ರಸ್ತೆ, ಮಾಗಡಿ ರಸ್ತೆ, ಮೈಸೂರು ರೋಡ್, ಹೊಸೂರು ರಸ್ತೆ ಹಾಗೂ ದೇವನಹಳ್ಳಿ ರಸ್ತೆಗಳಲ್ಲಿ ಪೊಲೀಸರು ಬಂದೋಬಸ್ತ್ ವಹಿಸಿದ್ದಾರೆ. ಮೊದಲು ಪ್ರತಿಭಟನಾಕಾರರು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸೇರುವ ಕಾರಣ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ನಾಳೆ ಸರ್ಕಾರಿ ಸೇವೆಗಳು ಇರುವ ಕಾರಣ ಯಾವುದೇ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಟ್ರಾಫಿಕ್ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ.