ಬೆಂಗಳೂರು: ಕರ್ನಾಟಕ ಬಿಜಪಿ ಮುಳುಗುತ್ತಿರುವ ಹಡಗಲ್ಲ, ಮುಳುಗಿ ಹೋದ ಹಡಗು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು. ನಗರದಲ್ಲಿಂದು ಬಿ.ಎಲ್.ಸಂತೋಷ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಿನ್ನೆ ಅವರ ಸಭೆಯಲ್ಲಿ ಯಾರ್ಯಾರು ಗೈರಾಗಿದ್ರು ಮತ್ತು ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿ.ಎಲ್.ಸಂತೋಷ್ ಅವರು ಗಮನಹರಿಸಲಿ. ಅವರ ಶಾಸಕರೇ ನಮ್ಮ ಜೊತೆಗೆ ಬರ್ತಿದ್ದಾರೆ. ಸೀ ಡೈವರ್ಸ್ ತರಹ ಮುಳುಗಿದ ಪಕ್ಷವನ್ನು ಸಂತೋಷ್ ಮೇಲೆತ್ತಲಿ ಎಂದು ತಿರುಗೇಟು ಕೊಟ್ಟರು.
ಬಿಜೆಪಿಯಲ್ಲಿ ಈವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಪಕ್ಷ ನಾಯಕ ಇಲ್ಲದೇ ಅಧಿವೇಶನ ನಡೆದಿದೆ. ನನಗೆ ಬಂದ ಮಾಹಿತಿ ಪ್ರಕಾರ ನಿನ್ನೆಯ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಗೈರಾಗಿದ್ದರು. ಹಾಗಾಗಿ ನಮ್ಮ ಪಕ್ಷದ ಚಿಂತೆ ಬಿಟ್ಟು ತಮ್ಮ ಪಕ್ಷದಲ್ಲೇನಾಗಿದೆ ಎಂಬುದನ್ನು ಸಂತೋಷ್ ನೋಡಿಕೊಳ್ಳಬೇಕು. ನಮ್ಮಲ್ಲಿ ಯಾವೊಬ್ಬ ಶಾಸಕರೂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲ್ಲ. ಬದಲಿಗೆ ಬಿಜೆಪಿ ಶಾಸಕರೇ ನಮ್ಮ ಪಕ್ಷ ಸೇರ್ತಿದ್ದಾರೆ. ಪಕ್ಷ ಬಿಡುತ್ತಿರುವ ಶಾಸಕರ ಮೇಲೆ ಒತ್ತಡ ಹಾಕಲು ಸಂತೋಷ್ ಹೇಳ್ತಿದ್ದಾರೆ. ಅವರ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಹೇಳಿಕೆ ಕೊಡ್ತಿದ್ದಾರೆ. ಹೀಗೇ ಆದರೆ ಮುಂದೆ ಬಿ.ಎಲ್.ಸಂತೋಷ್ ಸಭೆ ಮಾಡುವುದಕ್ಕೆ ಯಾರೂ ಉಳಿಯುವುದಿಲ್ಲ ಎಂದು ಲೇವಡಿ ಮಾಡಿದರು.
ಬಿಜಿಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಿನ್ನೆ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡುತ್ತಾ, ಆಪರೇಷನ್ ಹಸ್ತದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆಪರೇಷನ್ ವಿದ್ಯಮಾನ ನಡೆಯುತ್ತಿಲ್ಲ, ವಾಸ್ತವವೇ ಬೇರೆ ಇದೆ, ಬಿಜೆಪಿಯಿಂದ ಯಾರೂ ಕಾಂಗ್ರೆಸ್ನತ್ತ ಹೋಗುತ್ತಿಲ್ಲ. ಹಾಗೆ ನೋಡಿದರೆ ನನ್ನ ಜೊತೆಗೆ 40-45 ಕಾಂಗ್ರೆಸ್ ಮುಖಂಡರು ಸಂಪರ್ಕದಲ್ಲಿದ್ದಾರೆ. ವರಿಷ್ಠರು ಒಪ್ಪಿದರೆ ಒಂದೇ ದಿನದಲ್ಲಿ ಅವರನ್ನೆಲ್ಲಾ ಕರೆತರಬಲ್ಲೆ. ಆದರೆ ಅದರ ಅಗತ್ಯ ನಮಗಿಲ್ಲ ಎಂದು ಹೇಳಿದ್ದರು.
ಮತ್ತೊಂದೆಡೆ, ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಮಾತನಾಡುತ್ತಾ, ಆಪರೇಷನ್ ಹಸ್ತದ ಭ್ರಮೆ ಇದೆ. ಆದರೆ ನಾವ್ಯಾರೂ ಅದರಲ್ಲಿ ಬೀಳುವ ಅವಶ್ಯಕತೆ ಇಲ್ಲ, ಯಾವುದೇ ಪಕ್ಷಾಂತರದ ಚಟುವಟಿಕೆಗಳೂ ನಡೆಯುತ್ತಿಲ್ಲ. ಆದರೆ ಬಿಜೆಪಿಯನ್ನು ದುರ್ಬಲ ಮಾಡಲು ಕಾಂಗ್ರೆಸ್ ಹೊರಟಿದೆ. ಯಾರೂ ಕೂಡ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಎಂ.ಬಿ.ಪಾಟೀಲ್, ಕರ್ನಾಟಕ ಬಿಜೆಪಿ ಮುಳುಗಿರುವ ಹಡಗು. ಮುಳುಗುತ್ತಿರುವ ಹಡಗಲ್ಲ, ಮುಳುಗಿ ಹೋದ ಹಡಗು ಅದು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಏರ್ಲೈನ್ಸ್ ಪ್ರಾರಂಭಿಸುವ ಚಿಂತನೆ: ಸಚಿವ ಎಂ.ಬಿ.ಪಾಟೀಲ್