ಭೂ ಪರಿವರ್ತನೆ ಕಾಲಾವಧಿ 7 ದಿನಕ್ಕೆ ಇಳಿಸುವ ಕರ್ನಾಟಕ ಭೂ ಕಂದಾಯ ವಿಧೇಯಕ ಅಂಗೀಕಾರ - ಭೂ ಪರಿವರ್ತನಾ ಅವಧಿ
ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 30 ದಿನಗಳು ಇರುವ ಭೂ ಪರಿವರ್ತನಾ ಅವಧಿಯನ್ನು 7 ದಿನಗಳಿಗೆ ಇಳಿಸುವ ಮಸೂದೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
![ಭೂ ಪರಿವರ್ತನೆ ಕಾಲಾವಧಿ 7 ದಿನಕ್ಕೆ ಇಳಿಸುವ ಕರ್ನಾಟಕ ಭೂ ಕಂದಾಯ ವಿಧೇಯಕ ಅಂಗೀಕಾರ R Ashok](https://etvbharatimages.akamaized.net/etvbharat/prod-images/768-512-17285837-thumbnail-3x2-lek.jpg?imwidth=3840)
ಬೆಂಗಳೂರು/ಬೆಳಗಾವಿ: ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಲ್ಲಿ ಭೂ ಪರಿವರ್ತನೆ ಕಾಲಾವಧಿಯನ್ನು ಒಂದು ತಿಂಗಳಿನಿಂದ ಏಳು ದಿನಗಳಿಗೆ ಇಳಿಸುವ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ಕಂದಾಯ ಸಚಿವ ಆರ್. ಅಶೋಕ್ ಮಂಡಿಸಿದ ಕರ್ನಾಟಕ ಭೂ ಕಂದಾಯ ವಿಧೇಯಕ 2022 ಕ್ಕೆ ಕೆಲ ಸಲಹೆ ಸೂಚನೆಗಳನ್ನು ನೀಡಿ ಒಪ್ಪಿಗೆ ನೀಡಲಾಯಿತು. ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 30 ದಿನಗಳು ಇರುವ ಭೂ ಪರಿವರ್ತನಾ ಅವಧಿಯನ್ನು 7 ದಿನಗಳಿಗೆ ಇಳಿಸಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಕಂದಾಯ ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಅರ್ಹ ದಾಖಲೆ ಸಮೇತ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಭೂ ಪರಿವರ್ತನಾ ಆದೇಶವಾಗದಿದ್ದರೆ ಅದು ತನ್ನಿಂದ ತಾನೇ (ಡೀಮ್ಡ್)ಭೂ ಪರಿವರ್ತನೆ ಆಗಿದೆ ಎಂದು ಭಾವಿಸಬೇಕಾಗುತ್ತದೆ. ಅದಕ್ಕೆ ಈ ವಿಧೇಯಕ ಅವಕಾಶ ಕಲ್ಪಿಸಲಾಗಿದೆ. ಇದು ಕೇವಲ ಯೋಜನಾ ಪ್ರಾಧಿಕಾರ ಹೊಂದಿರುವ ಪ್ರದೇಶಗಳಿಗೆ ಅನ್ವಯವಾಗಲಿದ್ದು, ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಒಂದು ತಿಂಗಳಿನ ಅವಧಿ ಮುಂದುವರೆಯಲಿದೆ ಎಂದು ಹೇಳಿದರು.
ಹೆಚ್.ಕೆ.ಪಾಟೀಲ್, ಆರ್.ರಮೇಶ್‍ಕುಮಾರ್, ಶಿವಲಿಂಗೇಗೌಡ, ಅರವಿಂದ ಲಿಂಬಾವಳಿ ಸೇರಿದಂತೆ ಇನ್ನಿತರ ಕೆಲ ಸದಸ್ಯರ ಸಲಹೆಗಳನ್ನು ಸಮ್ಮತಿಸಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು.
ಮಸೂದೆಯ ಅಂಶಗಳೇನು?: ಮಾಸ್ಟರ್ ಪ್ಲಾನ್ ಇರುವ ಪ್ರದೇಶದ ಭೂ ಪರಿವರ್ತನೆ: ಪ್ರಸ್ತುತ ಜಾರಿಗೆ ತರಲು ಉದ್ದೇಶಿಸಿರುವ ವಿಧೇಯಕವು ಭೂ ಪರಿವರ್ತನಾ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಿದೆ.
ಈ ತಿದ್ದುಪಡಿಯಿಂದ ಮಾಸ್ಟರ್ ಪ್ಲಾನ್ ವ್ಯಾಪ್ತಿಗೊಳಪಡುವ ಭೂಮಿಗಳನ್ನು ಅರ್ಜಿ ಸಲ್ಲಿಸಿದ 30 ದಿನಗಳಿಗೆ ಬದಲಾಗಿ ಕೇವಲ 7 ದಿನಗಳಲ್ಲಿ ಭೂ ಪರಿವರ್ತನೆ ಆದೇಶವನ್ನು ನೀಡಲಾಗುವುದು.
ಒಂದು ವೇಳೆ ಏಳು ದಿನಗಳಲ್ಲಿ ಜಿಲ್ಲಾಧಿಕಾರಿಯವರು ಭೂ ಪರಿವರ್ತನಾ ಆದೇಶವನ್ನು ನೀಡದಿದ್ದಲ್ಲಿ ಅರ್ಜಿ ಸಲ್ಲಿಕೆಯಾದ 15 ದಿನಗಳ ಒಳಗಾಗಿ 'ಪರಿಭಾವಿತ ಭೂ ಪರಿವರ್ತನೆ' ಎಂದು ಪರಿಗಣಿಸಲಾಗುತ್ತದೆ.
ಮಾಸ್ಟರ್ ಪ್ಲಾನ್ ಇಲ್ಲದ ಪ್ರದೇಶದ ಭೂ ಪರಿವರ್ತನೆ: ಅಫಿಡವಿಟ್ ಆಧಾರಿತ ಭೂ ಪರಿವರ್ತನೆಯಲ್ಲಿ ಅರ್ಜಿ ಸ್ವೀಕರಿಸಿದ 15 ದಿನಗಳ ಒಳಗಾಗಿ ಸಂಬಂಧಿಸಿದ ಪ್ರಾಧಿಕಾರವು ಅಭಿಪ್ರಾಯವನ್ನು ನೀಡಬೇಕಾಗುತ್ತದೆ. ಸಂಬಂಧಪಟ್ಟ ಪ್ರಾಧಿಕಾರವು ಅಭಿಪ್ರಾಯ ನೀಡಿದ ನಂತರ ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿಯವರು ಭೂ ಪರಿವರ್ತನಾ ಆದೇಶವನ್ನು ನೀಡುತ್ತಾರೆ.
ಇದನ್ನೂ ಓದಿ: ಪ್ರಚಾರ ತೆಗೆದುಕೊಳ್ಳುವುದನ್ನು ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ : ಸಿದ್ದರಾಮಯ್ಯ ಒತ್ತಾಯ
ಒಂದು ವೇಳೆ ಸಂಬಂಧಿಸಿದ ಪ್ರಾಧಿಕಾರವು 15 ದಿನಗಳ ಒಳಗಾಗಿ ಅಭಿಪ್ರಾಯವನ್ನು ನೀಡದಿದ್ದಲ್ಲಿ, ಸಂಬಂಧಿಸಿದ ಪ್ರಾಧಿಕಾರವು ಅನುಮತಿ ನೀಡಿದೆ ಎಂದು ಭಾವಿಸಿ, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಜಿಲ್ಲಾಧಿಕಾರಿ ಭೂ ಪರಿವರ್ತನಾ ಆದೇಶವನ್ನು ನೀಡುತ್ತಾರೆ.
ಸಂಬಂಧಪಟ್ಟ ಪ್ರಾಧಿಕಾರದಿಂದ ಅಭಿಪ್ರಾಯ ಸ್ವೀಕೃತವಾದ 15 ದಿನಗಳ ಒಳಗಾಗಿ ಜಿಲ್ಲಾಧಿಕಾರಿಯವರು ಭೂ ಪರಿವರ್ತನಾ ಆದೇಶವನ್ನು ನೀಡದಿದ್ದಲ್ಲಿ ಅರ್ಜಿ ಸಲ್ಲಿಸಿದ 30 ದಿನದ ಒಳಗಾಗಿ ಅದನ್ನು "ಪರಿಭಾವಿತ ಭೂ ಪರಿವರ್ತನೆ" ಎಂದು ಪರಿಗಣಿಸಲಾಗುವುದು.
ಇದನ್ನೂ ಓದಿ: ಸ್ಟಾರ್ಟ್ ಅಪ್ ನೀತಿ, ಸ್ಕ್ರ್ಯಾಪ್ ನೀತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ