ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದೆ. ರಾಜಧಾನಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಪೈಕಿ ಬ್ಯಾಟರಾಯನಪುರ ಸಹ ಪ್ರತಿಷ್ಠಿತ ಕ್ಷೇತ್ರವಾಗಿದೆ. ಕ್ಷೇತ್ರಗಳ ಪುನರ್ವಿಂಗಡಣೆ ಬಳಿಕ ಶೇ.50ರಷ್ಟು ಬಿಬಿಎಂಪಿ ವ್ಯಾಪ್ತಿ ಮತ್ತು ಶೇ.50ರಷ್ಟು ಬೆಂಗಳೂರು ಜಿಲ್ಲೆ ವ್ಯಾಪ್ತಿಗೆ ಸೇರಿರುವ ಬ್ಯಾಟರಾಯನಪುರ ನಾಲ್ಕನೇ ಬಾರಿ ಚುನಾವಣೆಗೆ ಸಜ್ಜಾಗಿದೆ.
ಮಾಜಿ ಸಚಿವ ಕೃಷ್ಣಭೈರೇಗೌಡ ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿ ನಾಯಕನಾಗಿ ಬೆಳೆಯುತ್ತಿದ್ದು, ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ನಾಲ್ಕನೇ ಬಾರಿ ಗೆಲುವಿನಲ್ಲಿ ವಿಶ್ವಾಸದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿರುವ ಅವರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದೇ ಅಂಶವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.
ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಕಳೆದ ಮೂರು ಚುನಾವಣೆಗಳಿಂದ ಪ್ರಯತ್ನಿಸುತ್ತಿದ್ದರೂ, ಅದು ಸಾಧ್ಯವಾಗಿಲ್ಲ. ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಸೋದರ ಸಂಬಂಧಿಯಾಗಿರುವ ಎ.ರವಿ ಅವರಿಗೆ ಬಿಜೆಪಿ ಸತತ ಮೂರು ಬಾರಿ ಟಿಕೆಟ್ ನೀಡಿತ್ತು. ಆದರೂ, ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವುದಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿ ಹೆಚ್.ಸಿ.ತಮ್ಮೇಶ್ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಬದಲಾವಣೆ ಮಾಡುವಂತೆ ಮತ್ತು ಬಾಕಿಯಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿ ಅವಕಾಶ ಮಾಡಿಕೊಡಬೇಕು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಅವರು ಮತಯಾಚನೆಯಲ್ಲಿ ತೊಡಗಿದ್ದಾರೆ.
ಅಲ್ಲದೆ, ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ವೇಣುಗೋಪಾಲ್ ಅವರಿಗೆ ಟಿಕೆಟ್ ನೀಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತಯಾಚನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ನಡುವೆ ಜೆಡಿಎಸ್ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಇಡೀ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರಗಳನ್ನು ಕೈಗೊಳ್ಳುತ್ತಿದ್ದಾರೆ.
ಕಳೆದ 3 ಚುನಾವಣೆಗಳ ಹಿನ್ನೆಲೆ: 2008ರಿಂದ ಸತತವಾಗಿ ಕಾಂಗ್ರೆಸ್ನ ಕೃಷ್ಣಭೈರೇಗೌಡ ಗೆಲುವು ಸಾಧಿಸುತ್ತಿದ್ದಾರೆ. 2008ರಲ್ಲಿ ಕಾಂಗ್ರೆಸ್ - 60,979, ಬಿಜೆಪಿ - 51,627 ಹಾಗೂ ಜೆಡಿಎಸ್ - 21,598 ಮತ ಪಡೆದಿತ್ತು. ಶೇ.6.5ರಷ್ಟು ಮತಗಳ ಅಂತರದಿಂದ ಕೃಷ್ಣಭೈರೇಗೌಡ ಗೆದ್ದಿದ್ದರು. 2013ರಲ್ಲಿ ಕಾಂಗ್ರೆಸ್ - 96,125, ಬಿಜೆಪಿ - 63,627, ಜೆಡಿಎಸ್ - 41,287 ಮತ ಗಳಿಸಿತ್ತು. ಆಗ ಶೇ.15.55 ಮತಗಳ ಅಂತರದಿಂದ ಕಾಂಗ್ರೆಸ್ ಜಯ ದಾಖಲಿಸಿತ್ತು. 2018ರಲ್ಲಿ ಕೃಷ್ಣಭೈರೇಗೌಡ ಅವರಿಗೆ ಬಿಜೆಪಿಯ ಎ.ರವಿ ಪ್ರಬಲ ಪೈಪೋಟಿ ನೀಡಿದ್ದರು. ಆಗ ಕಾಂಗ್ರೆಸ್ - 1,14,964, ಬಿಜೆಪಿ - 1,09,293 ಪಡೆದರೆ, ಜೆಡಿಎಸ್ - 22,490 ಪಡೆದಿತ್ತು. ಶೇ.2.2ರಷ್ಟು ಮತಗಳ ಅಂತರದಲ್ಲಿ ಕೃಷ್ಣಭೈರೇಗೌಡ ಗೆದ್ದಿದ್ದರು.
ಈ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಗೆಲುವಿಗಾಗಿ ತಮ್ಮ - ತಮ್ಮ ಲೆಕ್ಕಾಚಾರದಲ್ಲಿ ಚುನಾವಣಾ ತಂತ್ರ ಹೆಣೆಯುತ್ತಿವೆ. ಇನ್ನೊಂದೆಡೆ ಮತದಾರರ ನಡೆಯ ಮೇಲೆ ಅಭ್ಯರ್ಥಿಗಳ ಭವಿಷ್ಯ ತೀರ್ಮಾನವಾಗಲಿದೆ. ಕ್ಷೇತ್ರದಲ್ಲಿ ಒಟ್ಟು ಮತದಾರರು 4,69,806 ಇದ್ದು, ಇದರಲ್ಲಿ ಪುರುಷರು 2,43,755, ಮಹಿಳೆಯರು 2,25,938 ಹಾಗೂ ತೃತೀಯ ಲಿಂಗಿಗಳು 113 ಜನರಿದ್ದಾರೆ.
ಕ್ಷೇತ್ರದ ಚಿತ್ರಣ: ಈ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಹಾಗೂ ಪರಿಶಿಷ್ಟ ಸಮುದಾಯದವರೇ ನಿರ್ಣಾಯಕರು. ತೆಲುಗು, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಜನರು ಸಹ ನೆಲೆಸಿದ್ದಾರೆ. ಅಪಾರ್ಟ್ಮೆಂಟ್ಗಳು, ಗಾರ್ಮೆಂರ್ಟ್ಗಳು ಈ ಕ್ಷೇತ್ರದಲ್ಲಿ ಹೆಚ್ಚು ಇದೆ. ಅಲ್ಲದೇ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಪ್ರಮುಖ ರಸ್ತೆ ಈ ಕ್ಷೇತ್ರದ ಮೂಲಕ ಹಾದುಹೋಗುತ್ತದೆ. ಸಾಕಷ್ಟು ಕಂಪನಿಗಳು ಹೊಸದಾಗಿ ಪ್ರಾರಂಭವಾಗುತ್ತಿದ್ದು, ದೇಶದ ಮೂಲೆ ಮೂಲೆಗಳಿಂದ ಬಂದ ಜನತೆ ಇಲ್ಲಿ ನೆಲೆಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಈ ಕ್ಷೇತ್ರವು ವಾಣಿಜ್ಯ ವಹಿವಾಟಿನಲ್ಲೂ ಮುಂದೆ ಇದೆ. ಆದರೆ, ಮೂಲ ಸೌಕರ್ಯಗಳ ಸಮಸ್ಯೆಯಿಂದ ಹೊರತಾಗಿಲ್ಲ. ಜಕ್ಕೂರು ಮತ್ತು ಯಲಹಂಕ ಸಂಪರ್ಕಿಸುವ ರೈಲ್ವೆ ಫ್ಲೈಓವರ್ ಕಾಮಗಾರಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಸಾತನೂರು, ಶ್ರೀನಿವಾಸಪುರ, ಕಟ್ಟಿಗೇನಹಳ್ಳಿ, ಥಣಿಸಂದ್ರ, ಬ್ಯಾಟರಾಯನಪುರ, ಜಕ್ಕೂರು, ಅಮೃತಹಳ್ಳಿ, ಅಮೃತನಗರ, ಹೆಗಡೆ ನಗರ ಸೇರಿದಂತೆ ಹಲವು ಬಡಾವಣೆಗಳು ಒಳಗೊಂಡಿದ್ದು, ಕೆಲ ಬಡಾವಣೆಗಳು ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣಿಸುತ್ತದೆ.
ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿವೆ. ಕಾವೇರಿ ಪೈಪ್ಲೈನ್ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಹಲವು ಸಮಸ್ಯೆಗಳ ನಡುವೆಯೂ ಕೆರೆಗಳು ಮತ್ತು ಮುಖ್ಯ ರಸ್ತೆಗಳಿಗೆ ಕಾಯಕಲ್ಪ ನೀಡಿರುವುದು ಸೇರಿದಂತೆ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳ ಪೈಕಿ ಹಲವು ಹಳ್ಳಿಗಳು ಕ್ಷೇತ್ರದ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಇಲ್ಲಿ ಕೂಡ ಕುಡಿಯುವ ನೀರು, ರಸ್ತೆ ಸೇರಿ ಹಲವು ಮೂಲಸೌಲಭ್ಯಗಳ ಕೊರತೆ ಬಗ್ಗೆ ಸ್ಥಳೀಯರು ದೂರತ್ತಾರೆ.
ಇದನ್ನೂ ಓದಿ: ಗಣಿಧಣಿಗಳ ಕ್ಷೇತ್ರದಲ್ಲಿ ಒಂದೆಡೆ ಕುಟುಂಬದಲ್ಲೇ ಪೈಪೋಟಿ.. ಇನ್ನೊಂದೆಡೆ ಹಳೆ ಹುಲಿಗಳ ನಡುವೆ ಗುದ್ದಾಟ..