ಬೆಂಗಳೂರು: ವಿಧಾನಪರಿಷತ್ನಲ್ಲಿ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಮೂರು ಪಕ್ಷಗಳು ಪಣತೊಟ್ಟಿವೆ. ಹೀಗಾಗಿ, ಈ ಬಾರಿಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಸ್ತಿತ್ವದ ಪ್ರಶ್ನೆಯಾದರೆ, ತನ್ನ ಸ್ಥಾನ ಉಳಿಸಿಕೊಳ್ಳುವ ಹಠದಲ್ಲಿ ಜೆಡಿಎಸ್ ಇದೆ. ಈ ನಡುವೆ ಬಿಜೆಪಿ ಬಲ ಹೆಚ್ಚಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ.
ರಾಜಕೀಯ ಶಕ್ತಿ ಕೇಂದ್ರದಲ್ಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರ ಅತ್ಯಂತ ಪ್ರಭಾವಿ ಕ್ಷೇತ್ರವಾಗಿದೆ. ಹೀಗಾಗಿ, ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು, ಮೂರು ಪಕ್ಷಗಳಿಗೆ ಒಂದು ರೀತಿಯ ಪ್ರತಿಷ್ಠೆಯಾಗಿದೆ.
ಭಾರೀ ಪೈಪೋಟಿ : ಜೆಡಿಎಸ್ನಿಂದ ಮೂರು ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ, ಈ ಬಾರಿ ಬಿಜೆಪಿಗೆ ಸೇರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಿಂದಿನ ಸಾಧನೆ, ಮುಂದಿನ ಗುರಿ ಇಟ್ಟುಕೊಂಡು ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪರಿಣಿತರು ಹಾಗೂ ತಮ್ಮದೇ ಆದ ಪ್ರಭಾವ ಬಳಸಿಕೊಂಡು ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಪುಟ್ಟಣ್ಣ ಮುಂದಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ವಕೀಲರಾಗಿ ಚಿರಪರಿಚಿತರು, ವಕೀಲರ ಸಂಘದ ಅಧ್ಯಕ್ಷರಾಗಿದ್ದಾರೆ. ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾಗಿಯೂ ಕೆಲಸ ಮಾಡಿದ ಅನುಭವ ಇದೆ. ಪಕ್ಷದ ಗಟ್ಟಿ ನೆಲೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ವರ್ಚಸ್ಸು ಹಾಗೂ ಜನಪರ ಕೆಲಸಗಳನ್ನು ಮುಂದಿಟ್ಟು ಪ್ರಚಾರ ನಡೆಸುತ್ತಿದ್ದಾರೆ.
ಪ್ರಬಲ ಕಾಂಗ್ರೆಸ್ ನಾಯಕರ ವರ್ಚಸ್ಸು ಹಾಗೂ ಪಕ್ಷ ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ ನೀಡಿದ ಕೊಡುಗೆ ತಿಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಕಸರತ್ತು ನಡೆಸುತ್ತಿದ್ದು, ಬೆಂಗಳೂರಿನ ಹಲವಾರು ಶಿಕ್ಷಣ ಸಂಸ್ಥೆಗಳ ಜೊತೆಗಿನ ಸಂಪರ್ಕ ನೆರವಿಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಬದಲಾದ ರಾಜಕೀಯ ವಿದ್ಯಮಾನ, ಜಾತಿವಾರು ಲೆಕ್ಕಾಚಾರ ಕ್ಷೇತ್ರದ ರಾಜಕೀಯ ನಕ್ಷೆ ಬದಲಾಯಿಸಿದೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಜೊತೆಗೆ ಆಯಾ ಪಕ್ಷಗಳ ಪ್ರಭಾವವೂ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅದೇ ರೀತಿ ಕೊರೊನಾ ಸೋಂಕು ಕೂಡ ವ್ಯತಿರಿಕ್ತ ಪರಿಣಾಮ ಬೀರಿದೆ. ಕೋವಿಡ್ ನಿಂದಾಗಿ ತಮ್ಮ ಹೆಸರು ನೋಂದಣಿಯಲ್ಲೂ ಅರ್ಹ ಶಿಕ್ಷಕರು ಹೆಚ್ಚಿನ ಉತ್ಸಾಹ ತೋರಿಸದಿರುವುದು ಗಮನಾರ್ಹ ಸಂಗತಿ.
ಕ್ಷೇತ್ರದ ವ್ಯಾಪ್ತಿ : ಐದು ಲೋಕಸಭಾ ಕ್ಷೇತ್ರ ಹಾಗೂ 36 ವಿಧಾನಸಭಾ ಕ್ಷೇತಗಳನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರ ಒಳಗೊಂಡಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಲೋಕಸಭಾ ಸದಸ್ಯರ ಪೈಕಿ ಬಿಜೆಪಿಯಿಂದ 4, ಕಾಂಗ್ರೆಸ್ 1, ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ ಮತ್ತು ಕಾಂಗ್ರೆಸ್ನಿಂದ ತಲಾ 14, ಜೆಡಿಎಸ್ನಿಂದ 6 ಹಾಗೂ 1 ಪಕ್ಷೇತರ ಸದಸ್ಯರು ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾರೆ. ಇದರ ಜೊತೆಗೆ ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಇಲ್ಲಿ ಯಾರಿಗೆ ಪಟ್ಟ ಒಲಿಯಲಿದೆ ಎಂಬುವುದು ತಿಳಿದು ಬರಬೇಕಿದೆ. ಸರ್ಕಾರಿ, ಖಾಸಗಿ ಅನುದಾನಿತ, ಅನುದಾನರಹಿತ ಸೇರಿದಂತೆ ಅಂದಾಜು 6,500 ಶಿಕ್ಷಣ ಸಂಸ್ಥೆಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಮತದಾರರೆಷ್ಟು..? : ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 3 ಇತರ ಮತದಾರರು ಸೇರಿ ಒಟ್ಟು 22,089 ಮತದಾರರಿದ್ದಾರೆ. ಈ ಪೈಕಿ 7,946 ಪುರುಷರು ಮತ್ತು 14,140 ಮಹಿಳಾ ಮತದಾರರಿದ್ದಾರೆ.
ಚುನಾವಣಾ ಕಣದಲ್ಲಿರುವವರು : ಪುಟ್ಟಣ್ಣ - ಬಿಜೆಪಿ, ಪ್ರವೀಣ್ ಪೀಟರ್ - ಕಾಂಗ್ರೆಸ್, ಎ.ಪಿ. ರಂಗನಾಥ್ - ಜೆಡಿಎಸ್, ಚಂದ್ರಶೇಖರ್ ವಿ. ಸ್ಥಾವರಮಠ - ಜೆಡಿಯು. ಪಕ್ಷೇತರರು : ಬಿ.ಕೆ. ರಂಗನಾಥ್, ಎಸ್.ವಿ.ರಂಗನಾಥ್, ಟಿ.ರಂಗನಾಥ್, ಚಂದ್ರು ಮಾಸ್ಟರ್, ಎಂ.ಎನ್.ರವಿಶಂಕರ್.